May 2, 2026
Saturday, May 2, 2026
spot_img

ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ದೆಹಲಿಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಹೈವೋಲ್ಟೇಜ್‌ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ದೇಶದಲ್ಲಿ ತೈಲ ಅಭಾವ ಉಂಟಾಗಿದ್ದು, ಈ ಹಿನ್ನೆಲೆ ಪೆಟ್ರೋಲಿಯಂ, ಕಚ್ಚಾ ತೈಲ, ಅನಿಲ, ವಿದ್ಯುತ್‌ ಮತ್ತು ರಸಗೊಬ್ಬರ ವಲಯಗಳ ಪರಿಸ್ಥಿತಿಯನ್ನು ಅರಿಯಲು ಪ್ರಧಾನಿ ಮೋದಿ ಇಂದು ಕ್ಯಾಬಿನೆಟ್ ನ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ದೆಹಲಿ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅದ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ಆರೋಗ್ಯ ಸಚಿವ ಜೆ.ಪಿ ನಡ್ಡಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸಹಿತ ಹಿರಿಯ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಸಂಪುಟ ಕಾರ್ಯದರ್ಶಿ, ಜಾಗತಿಕ ಪರಿಸ್ಥಿತಿ ಮತ್ತು ಭಾರತ ಸರ್ಕಾರದ ಎಲ್ಲಾ ಸಂಬಂಧಿತ ಸಚಿವಾಲಯಗಳು,ಇಲಾಖೆಗಳು ಇದುವರೆಗೆ ಕೈಗೊಂಡಿರುವ ಮತ್ತು ಯೋಜಿಸುತ್ತಿರುವ ಪರಿಹಾರ ಕ್ರಮಗಳ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿದರು.

ಕೃಷಿ, ರಸಗೊಬ್ಬರ, ಆಹಾರ ಭದ್ರತೆ, ಪೆಟ್ರೋಲಿಯಂ, ವಿದ್ಯುತ್, ಎಂ ಎಸ್‌ ಎಂ ಇ ಗಳು, ರಫ್ತುದಾರರು, ಹಡಗು ಸಾರಿಗೆ, ವ್ಯಾಪಾರ, ಹಣಕಾಸು, ಪೂರೈಕೆ ಸರಪಳಿಗಳು ಮತ್ತು ಎಲ್ಲಾ ಬಾಧಿತ ವಲಯಗಳಲ್ಲಿ ನಿರೀಕ್ಷಿತ ಪರಿಣಾಮ ಮತ್ತು ಅದನ್ನು ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ದೇಶದ ಒಟ್ಟಾರೆ ಸ್ಥೂಲ ಆರ್ಥಿಕ ಸನ್ನಿವೇಶ ಮತ್ತು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಇದೇ ವೇಳೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಆರ್ಥಿಕತೆಯ ಮೇಲೆ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಕಾಲೀನ ಅವಧಿಯಲ್ಲಿ ಗಮನಾರ್ಹ ಪರಿಣಾಮ ಬೀರಲಿದೆ. ಭಾರತದ ಮೇಲೆ ಇದರ ಪ್ರಭಾವವನ್ನು ಅಂದಾಜಿಸಲಾಯಿತು ಮತ್ತು ತಕ್ಷಣದ ಹಾಗೂ ದೀರ್ಘಕಾಲೀನ ಪ್ರತಿರೋಧಕ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಆಹಾರ, ಇಂಧನ ಮತ್ತು ಇಂಧನ ಭದ್ರತೆ ಸೇರಿದಂತೆ ಜನಸಾಮಾನ್ಯರ ನಿರ್ಣಾಯಕ ಅಗತ್ಯಗಳ ಲಭ್ಯತೆಯ ಬಗ್ಗೆ ವಿವರವಾದ ಮೌಲ್ಯಮಾಪನ ಮಾಡಲಾಯಿತು. ಅಗತ್ಯ ವಸ್ತುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಕಾಲೀನ ಕ್ರಮಗಳ ಬಗ್ಗೆ ವಿವರವಾಗಿ ಮಾತುಕತೆ ನಡೆಸಿದರು.

ಸಂಘರ್ಷದಿಂದಾಗಿ ರೈತರ ಮೇಲಾಗುವ ಪರಿಣಾಮ ಮತ್ತು ಮುಂಗಾರು ಹಂಗಾಮಿಗೆ ಅವರಿಗೆ ಅಗತ್ಯವಿರುವ ರಸಗೊಬ್ಬರದ ಅವಶ್ಯಕತೆಯನ್ನು ಅಂದಾಜಿಸಲಾಯಿತು. ರಸಗೊಬ್ಬರಗಳ ಸಮರ್ಪಕ ದಾಸ್ತಾನು ಕಾಯ್ದುಕೊಳ್ಳಲು ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಕ್ರಮಗಳು ಸಕಾಲಿಕ ಲಭ್ಯತೆ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುತ್ತವೆ. ಭವಿಷ್ಯದಲ್ಲಿ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರಗಳ ಪರ್ಯಾಯ ಮೂಲಗಳ ಬಗ್ಗೆಯೂ ಚರ್ಚಿಸಲಾಯಿತು.

ಎಲ್ಲಾ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನುಗಳ ಸಮರ್ಪಕ ಪೂರೈಕೆಯು ಭಾರತದಲ್ಲಿ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲಾಯಿತು. ರಾಸಾಯನಿಕಗಳು, ಫಾರ್ಮಾಸೂಟಿಕಲ್ಸ್, ಪೆಟ್ರೋಕೆಮಿಕಲ್ಸ್ ಮತ್ತು ಇತರ ಕೈಗಾರಿಕಾ ವಲಯಗಳಿಗೆ ಅಗತ್ಯವಿರುವ ಆಮದು ಮೂಲಗಳನ್ನು ವೈವಿಧ್ಯಗೊಳಿಸಲು ಹಲವಾರು ಕ್ರಮಗಳನ್ನು ಚರ್ಚಿಸಲಾಯಿತು. ಅದೇ ರೀತಿ ಭಾರತೀಯ ಸರಕುಗಳನ್ನು ಉತ್ತೇಜಿಸಲು ಮುಂದಿನ ದಿನಗಳಲ್ಲಿ ಹೊಸ ರಫ್ತು ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ವಿವಿಧ ಸಚಿವಾಲಯಗಳು ಪ್ರಸ್ತಾಪಿಸಿದ ಹಲವಾರು ಕ್ರಮಗಳನ್ನು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಮುಂಬರುವ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಸಿದ್ಧಪಡಿಸಲಾಗುವುದು ಮತ್ತು ಜಾರಿಗೆ ತರಲಾಗುವುದು.ಜೊತೆಗೆ ʼಸಂಪೂರ್ಣ ಸರ್ಕಾರʼದ ದೃಷ್ಟಿಕೋನದೊಂದಿಗೆ ಸಮರ್ಪಿತವಾಗಿ ಕೆಲಸ ಮಾಡಲು ಸಚಿವರು ಮತ್ತು ಕಾರ್ಯದರ್ಶಿಗಳ ಗುಂಪನ್ನು ರಚಿಸುವಂತೆ ನಿರ್ದೇಶನ ನೀಡಿದರು.

ಈ ಸಂಘರ್ಷವು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯಾಗಿದೆ ಮತ್ತು ಇಡೀ ಜಗತ್ತು ಯಾವುದೋ ಒಂದು ರೂಪದಲ್ಲಿ ಇದರಿಂದ ಬಾಧಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಂಘರ್ಷದ ಪರಿಣಾಮದಿಂದ ನಾಗರಿಕರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ನಾಗರಿಕರಿಗೆ ಅನಾನುಕೂಲತೆಯನ್ನು ಕನಿಷ್ಠಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಎಲ್ಲಾ ಅಂಗಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು.

ಪ್ರಮುಖ ಸರಕುಗಳ ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಡೆಯದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಸೂಕ್ತ ಸಮನ್ವಯ ಸಾಧಿಸುವಂತೆ ಪ್ರಧಾನಿ ಮೋದಿ ಅವರು ಸೂಚನೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !