ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಚಾಪ್ಟರ್ 1’ ರಿಲೀಸ್ ಕುರಿತ ಗೊಂದಲಗಳಿಗೆ ಮತ್ತೊಮ್ಮೆ ಹೊಂಬಾಳೆ ಫಿಲಂಸ್ ಸ್ಪಷ್ಟನೇ ನೀಡಿದ್ದು, ಹೊಸ ಪೋಸ್ಟ್ವೊಂದನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.
ಅಕ್ಟೋಬರ್ 2ರಂದು ‘ಕಾಂತಾರ ಚಾಪ್ಟರ್ 1’ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.
ಹೊಂಬಾಳೆ ಸಂಸ್ಥೆ ಹಂಚಿಕೊಂಡ ಪೋಸ್ಟ್‌ನಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2, 2025ಕ್ಕೆ ನಿಗದಿಪಡಿಸಲಾಗಿದೆ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಘೋಷಿಸಿತ್ತು. ಆದರೆ, ಇತ್ತೀಚೆಗೆ ಈ ದಿನಾಂಕದ ಬಗ್ಗೆ ಕೆಲವು ಊಹಾಪೋಹಗಳು ಹರಡಿದ್ದವು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಹೊಂಬಾಳೆ ಫಿಲಂಸ್, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಈ ಹಿಂದಿನ `ಕಾಂತಾರ’ ಚಿತ್ರದ ಯಶಸ್ಸಿನ ನಂತರ, ‘ಕಾಂತಾರ ಚಾಪ್ಟರ್ 1’ ಸಹ ಪ್ರೇಕ್ಷಕರನ್ನು ಮತ್ತಷ್ಟು ಆಳವಾದ ಕಥೆ, ಸಂಸ್ಕೃತಿ ಮತ್ತು ದೈವಿಕ ಲೋಕಕ್ಕೆ ಕರೆದೊಯ್ಯಲಿದೆ. ನಿಮ್ಮ ಕಾತರಕ್ಕೆ ತಕ್ಕಂತೆ ಚಿತ್ರವು ಅಂದುಕೊಂಡ ದಿನಾಂಕದಂದೇ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಆದ್ದರಿಂದ, ಯಾವುದೇ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ, ಅಧಿಕೃತ ಪ್ರಕಟಣೆಗಳನ್ನಷ್ಟೇ ನಂಬಲು ಚಿತ್ರತಂಡ ಮನವಿ ಮಾಡಿದೆ.