ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 14 ವರ್ಷಗಳ ನಂತರ ಹೀನಾಯ ಸೋಲನ್ನು ಅನುಭವಿಸಿದೆ. ಲೇಬರ್ ಪಕ್ಷವು ಕನ್ಸರ್ವೇಟಿವ್ ಪಕ್ಷವನ್ನು ಸೋಲಿಸಿದ ನಂತರ ರಿಷಿ ಸುನಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಇಂಗ್ಲೆಂಡ್ ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಅಧಿಕಾರ ಸ್ವೀಕರಿಸಲಿದ್ದಾರೆ .
ಇತ್ತ ಯುಕೆ ಚುನಾವಣೆಯಲ್ಲಿ ಜಯ ಗಳಿಸಿದ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಜೊತೆ ಪಾಸಿಟಿವ್ ಸಹಯೋಗವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಹಾಗೇ, ಅವರು ನಿರ್ಗಮಿಸುವ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರೆ.
‘UK ಸಾರ್ವತ್ರಿಕ ಚುನಾವಣೆಯಲ್ಲಿ ಗಮನಾರ್ಹ ವಿಜಯಕ್ಕಾಗಿ ಕೀರ್ ಸ್ಟಾರ್ಮರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು, ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಮ್ಮ ಸಕಾರಾತ್ಮಕ ಸಹಯೋಗವನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಕ್ಸ್ನಲ್ಲಿ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಯುಕೆ ಹೊಸ ಸರ್ಕಾರದೊಂದಿಗೆ ಸಹಕರಿಸಲು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜೊತೆಗೆ ‘ಬ್ರಿಟನ್‌ನ ನಿಮ್ಮ ಶ್ಲಾಘನೀಯ ನಾಯಕತ್ವಕ್ಕಾಗಿ ರಿಷಿ ಸುನಕ್ ಅವರಿಗೆ ಧನ್ಯವಾದಗಳು. ನಿಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಯುಕೆ ನಡುವಿನ ಸಂಬಂಧವನ್ನು ಗಾಢವಾಗಿಸಲು ನಿಮ್ಮ ಸಕ್ರಿಯ ಕೊಡುಗೆ ಅಪಾರ. ಭವಿಷ್ಯಕ್ಕಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.