ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇಂದು ರಾತ್ರಿ 8 ಗಂಟೆಗೆ ತೆಲಂಗಾಣ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜಭವನದಲ್ಲಿ ಭರ್ಜರಿ ಸಿದ್ದತೆ ನಡೆದಿದೆ.
64 ಸ್ಥಾನಗಳನ್ನು ಗೆದ್ದು ಬೀಗಿದ ಕಾಂಗ್ರೆಸ್ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲಿದೆ.ಕೆಲವೇ ಕ್ಷಣದಲ್ಲಿ ತೆಲಂಗಾಣದ ಸಿಎಂ ಯಾರೆಂಬುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಲಿದ್ದಾರೆ.
ತೆಲಂಗಾಣದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಬಹಳ ಕುತೂಹಲ ಮೂಡಿದ್ದು, ಇದರ ನಡುವೆ ರೇವಂತ್ ರೆಡ್ಡಿ ತೆಲಂಗಾಣದ ಸಿಎಂ ಪಟ್ಟ ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ)ನ್ನು ಸೋಲಿಸಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. ಕಳೆದ ಎರಡು ಅವಧಿಗೆ ಆಡಳಿತ ನಡೆಸಿದ ಕೆಸಿಆರ್ ನೇತೃತ್ವದ ಬಿಆರ್ಎಸ್ ಪಕ್ಷ ಈ ಬಾರಿ ಅಧಿಕಾರವನ್ನು ಕಳೆದುಕೊಂಡಿದೆ.
119 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಬಿಆರ್ಎಸ್ 39 ಸ್ಥಾನ, ಬಿಜೆಪಿ 8 ಸ್ಥಾನ, ಎಐಎಂಐಎಂ 7 ಸ್ಥಾನ, ಇತರರು 1 ಸ್ಥಾನದಲ್ಲಿ ಗೆಲುವು ದಾಖಲಿಸಿದ್ದಾರೆ.