ಹೊಸದಿಗಂತ ವರದಿ ಹಾವೇರಿ :
ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮಂಗಳವಾರ ರಾತ್ರಿ ಹೊಸಮುಖದ ಅಭ್ಯರ್ಥಿಯನ್ನು ಘೋಷಿಸಿ ಎಲ್ಲ ಕುತೂಹಲಗಳಿಗೆ ತೆರೆ ಎಳೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹುಬ್ಬಳ್ಳಿ ಅಂಜುಮನ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಸವಣೂರ ಹೆಸರನ್ನು ಕೊನೆಗೂ ಘೋಷಣೆ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣಾ ಅಖಾಡದಲ್ಲಿರುವ ಶಿಗ್ಗಾವಿಯನ್ನು ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರವೆಂದು ಪರಿಗಣಿಸಲಾಗಿತ್ತು. ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಬುಧವಾರದ ಬೆಳಗಿನವರೆಗೂ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಆದರೆ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಬುಧವಾರ ಬೆಳಿಗ್ಗೆ ಕೈ ಹೈಕಮಾಂಡ್ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಅಲ್ಪ ಸಂಖ್ಯಾತರನ್ನು ಸಮಾಧಾನಗೊಳಿಸುವ ಹಿನ್ನಲೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹುಬ್ಬಳ್ಳಿ ಅಂಜುಮನ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಸವಣೂರಗೆ ಟಿಕೆಟ್ ನೀಡಿ ಬಹಳ ಅಚ್ಚರಿ ಹಾಗೂ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ದೊಡ್ಡ ಶಾಕ್ ನೀಡಿದೆ.
ಕಾಂಗ್ರೆಸ್ ಅಲ್ಪ ಸಂಖ್ಯಾತರನ್ನು ಸಮಾಧಾನಗೊಳಿಸುವ ಬದಲು ಅವರಲ್ಲೆ ಒಡಕನ್ನುಂಟು ಮಾಡುವ ಕೆಲಸಕ್ಕೆ ಮುಂದಾಗಿರುವುದು ಈಗ ಸ್ಪಷ್ಟವಾದಂತಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು ಹಾಗೂ ಅಲ್ಪ ಸಂಖ್ಯಾತರ ನಾಯಕರಾಗಿದ್ದ ಮಾಜಿ ಶಾಸಕ ಸಯ್ಯದ ಅಜ್ಜಂಪೀರ ಖಾದ್ರಿ ಈಗಾಗಲೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡುವುದಾದರೆ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ನೀಡಿರೆಂದು ಹೇಳಿದ್ದರು. ಆದರೆ ಈಗ ಅವರೇ ಮೊಹಮ್ಮದ್ ಯೂಸುಫ್ ಸವಣೂರ ಅವರಿಗೆ ಶಿಗ್ಗಾವ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಬೆಳಿಗ್ಗೆ ಕೇಳಿಬಂದಿದೆ.
ಬಸವರಾಜ ಬೊಮ್ಮಾಯಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂಬ ನಿರೀಕ್ಷೆ ಇತ್ತು ಅದನ್ನು ಕಾಂಗ್ರೆಸ್ ಹೈಕಮಾಂಡ್ ಸಹ ಹೇಳಿತ್ತು. ಆದರೆ ಅಚ್ಚರಿಯ ಬೆಳವಣಿಯನ್ನುವಂತೆ ಈಗ ಸ್ಥಳೀಯ ಇಲ್ಲವೆ ಪ್ರಭಾವಿ ಲಿಂಗಾಯತ ವ್ಯಕ್ತಿಗಳಾರನ್ನು ಕಣಕ್ಕಿಳಿಸದೇ ಬೇರೆ ಊರಿನ ಅದು ಈ ಕ್ಷೇತ್ರದ ಜನತೆಗೆ ಗೊತ್ತಿರದ ಅಲ್ಪ ಸಂಖ್ಯಾತರಾದ ಮೊಹಮ್ಮದ್ ಸವಣೂರ ಅವರನ್ನು ಕಣಕ್ಕಿಳಿಸಿದೆ. ಈಗ ಎದ್ದಿರುವ ಬಂಡಾಯದ ನಡುವೆ ಅಲ್ಪ ಅವಧಿಯಲ್ಲಿ ಚುನಾವಣೆಯನ್ನು ಹೇಗೆ ಎದುರಿಸುತ್ತದೆ ಕಾಂಗ್ರೆಸ್ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.