ಹೊಸದಿಗಂತ ವರದಿ, ಮೈಸೂರು:
ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಸುವುದಕ್ಕೆ ಸೂಕ್ತ ಅಭ್ಯರ್ಥಿಗಳು ಸಿಗದೆ ಕಾಂಗ್ರೆಸ್ ಪರದಾಡುತ್ತಿದೆ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ ಟೀಕಿಸಿದರು.
ಸೋಮವಾರ ಬಿಜೆಪಿ ಮೈಸೂರು ನಗರ ಘಟಕದಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಸುವುದಕ್ಕೆ ಕಾಂಗ್ರೆಸ್ಗೆ ಸಮರ್ಥ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಆ ಪಕ್ಷದ ನಾಯಕರಿಗೆ ಕಣಕ್ಕಿಳಿಯುವ ಧೈರ್ಯ ಹಾಗೂ ಆಸಕ್ತಿಯೇ ಇಲ್ಲ. ಆದ್ದರಿಂದ, ಅರ್ಜಿ ಆಹ್ವಾನಿಸಿದರೂ ಆ ಪಕ್ಷದ ಯಾವೊಬ್ಬ ನಾಯಕನೂ ಟಿಕೆಟ್ಗೆ ಅರ್ಜಿ ಸಲ್ಲಿಸುವುದೇ ಇಲ್ಲ. ಟಿಕೆಟ್ಗಾಗಿ ಅರ್ಜಿ ಕರೆದರೆ ಕಾಂಗ್ರೆಸ್ ನಿಜ ಬಣ್ಣ ಬಯಲಾಗಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ, ಲೋಕಸಭಾ ಚುನಾವಣೆಯಲ್ಲೂ ೨ ಲಕ್ಷ ಕೊಟ್ಟು ಟಿಕೆಟ್ಗೆ ಅರ್ಜಿ ಸಲ್ಲಿಸುವಂತೆ ಆಹ್ವಾನ ನೀಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದರು.
ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರು ಕೂಡ ಅಭಿವೃದ್ಧಿ ಕಾಮಗಾರಿಗಳಿಗೆಂದು ಗುದ್ದಲಿಪೂಜೆ ನಡೆಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗಳ ಹೆಸರಲ್ಲಿ ತಮ್ಮ ನಾಯಕರ ಜೇಬು ತುಂಬಿಸುವ ಕೆಲಸವನ್ನಷ್ಟೆ ಕಾಂಗ್ರೆಸ್ ಮಾಡುತ್ತಿದೆ’ ಎಂದು ಆರೋಪಿಸಿದರು.
`ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅವುಗಳಿಗಾಗಿ ನೀಡಿದ ಅನುದಾನದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಮೊದಲು ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಬಡವರ ಹೆಸರಿನಲ್ಲಿ ಹಣ ದೋಚುತ್ತಿದೆ. ಬರ ಪರಿಹಾರ ಕಾಮಗಾರಿಗಳು ಕೂಡ ನಡೆಯುತ್ತಿಲ್ಲ. ಇದೆಲ್ಲವನ್ನೂ ನಾವು ಮತದಾರರಿಗೆ ತಿಳಿಸಿಕೊಡಬೇಕು. ಮೋದಿ ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರೂ ಈ ಬಾರಿಯ ದಾಖಲೆಯನ್ನು ಮುರಿಯಲು ಆಗದಂತಹ ಫಲಿತಾಂಶವನ್ನು ಕೊಡಬೇಕು’ ಎಂದು ತಿಳಿಸಿದರು.
ಇದೇ ವೇಳೆ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ರಾಜೇoದ್ರ, ಮೈಸೂರು ವಿಭಾಗದ ಕ್ಲಸ್ಟರ್ ಅಧ್ಯಕ್ಷರಾದ ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಅಧ್ಯಕ್ಷ ಎಲ್.ನಾಗೇಂದ್ರ, ಶಾಸಕ ಟಿ.ಎಸ್.ಶ್ರೀವತ್ಸ,
ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ಅನಿಲ್ ಥಾಮಸ್, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಸಂಸದ ಸಿ.ಎಚ್. ವಿಜಯಶಂಕರ್, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಾಘವೇಂದ್ರ, ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ವಿ.ಗಿರಿಧರ್, ಕೇಬಲ್ ಮಹೇಶ್, ಮಾಜಿ ಶಾಸಕ ವಾರುತಿರಾವ್ ಪವಾರ್, ನಗರಪಾಲಿಕೆಯ ಮಾಜಿ ಮೇಯರ್ಗಳಾದ ಶಿವಕುಮಾರ್, ಎಸ್. ಸಂದೇಶ್ಸ್ವಾಮಿ, ಹಿಂದುಳಿದ ವರ್ಗಗಳ ಮೋರ್ಚಾದ ಜೋಗಿ ಮಂಜು, ಚಾಮರಾಜನಗರ ಲೋಕಸಭೆಯ ಉಸ್ತುವಾರಿ ಎನ್.ವಿ.ಫಣೀಶ್, ಕವೀಶ್ ಗೌಡ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್ ಹಾಜರಿದ್ದರು.