ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರ ಉದ್ಘಾಟನೆಗೆ ಸಿದ್ದವಾಗಿರುವ ಈ ಸಂದರ್ಭ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಹಿಂದೂ ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಕಾಂಗ್ರೆಸ್ ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು? ಎಂದು ಪ್ರಶ್ನಿಸಿದ್ದಾರೆ.
ಇಡೀ ದೇಶವೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಇದು ಸ್ಪಷ್ಪ ನಿದರ್ಶನ ಎಂದು ಗುಡುಗಿದ್ದಾರೆ.