ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಿಪಕ್ಷಗಳು ಪಾಟ್ನಾದಲ್ಲಿ ಬೃಹತ್ ಸಭೆ ನಡೆಸಿದ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ಸ್ಟ್ (ಸಿಪಿಐಎಂ) ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
“ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ (ಮಹಾಜೋತ್) ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ-ಎಂ ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ ಸಂಬಂಧವನ್ನು ಮುರಿಯುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಕೂಚ್ ಬಿಹಾರ್ನಲ್ಲಿ ಪಂಚಾಯತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ದೀದಿ , ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಬಾರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬಿಜೆಪಿಯೊಂದಿಗೆ ಪರಸ್ಪರ ಒಪ್ಪಂದ ಹೊಂದಿದೆ ಎಂದು ಟೀಕಿಸಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ‘ಬಿಜೆಪಿ ವಿರುದ್ಧದ ಹೋರಾಟದಲ್ಲಿ ಟಿಎಂಸಿಯ ವಿಶ್ವಾಸಾರ್ಹತೆ ಯಾವಾಗಲೂ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಷ್ಟು ವರ್ಷಗಳಲ್ಲಿ ಟಿಎಂಸಿ ವಹಿಸಿದ ಪಾತ್ರ ನಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಸಿಎಂಐಎಂ ಕೂಡ ಹೇಳಿಕೆ ನೀಡಿದ್ದು, ಬಿಜೆಪಿ ವಿರುದ್ಧ ಹೋರಾಡುವ ಮಾರ್ಗಗಳ ಕುರಿತು ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಗೆ ಉಪನ್ಯಾಸ ನೀಡುವ ಕೊನೆಯ ವ್ಯಕ್ತಿ ಬ್ಯಾನರ್ಜಿಯಾಗಬೇಕು ಎಂದು ಹೇಳಿದೆ.