ಹೊಸದಿಗಂತ ವರದಿ ಶಿವಮೊಗ್ಗ:
ಯುದ್ದ ವಿರಾಮದ ನಂತರ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ಇತರೆ ಮುಖಂಡರು ಆಪರೇಶನ್ ಸಿಂಧೂರ ಬಗ್ಗೆ ಟೀಕೆ ಮಾಡುತ್ತಿರುವುದು ಸರಿಯಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ಮೋದಿ ಶರಣಾಗಿದ್ದಾರೆ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಯುದ್ದ ವಿರಾಮ ರಾಜನೀತಿಯೂ ಆಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತಿದೆ ಎಂದರು.
ಪಾಕಿಸ್ತಾನ ಮತ್ತೊಮ್ಮೆ ಹಿಂಸೆ ಮಾಡಿದರೆ ಯುದ್ದವೆಂದು ಭಾವಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿಯವರು ಸ್ಪಷ್ಟ ಸಂದೇಶ ನೀಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ನಾಯಕರ ಹೇಳಿಕೆಗಳು ಯುದ್ದ ವಿರಾಮಕ್ಕೆ ವ್ಯತಿರಿಕ್ತವಾಗಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತಿಯರೂ ದೇಶದ ಪರವಾಗಿ ನಿಲ್ಲಬೇಕಿದೆ ಎಂದರು.
ಯುದ್ದ ವಿರಾಮ ಘೋಷಣೆಯ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ತಿರಂಗ ಯಾತ್ರೆ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಕರೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿಯೂ ತಿರಂಗ ಯಾತ್ರೆಯನ್ನು ಪಕ್ಷಾತೀತವಾಗಿ ನಡೆಸಲಾಗುತ್ತದೆ ಎಂದರು.
ಮೇ ೧೪ ರಂದು ಬೆಂಗಳೂನಲ್ಲಿ ತಿರಂಗ ಯಾತ್ರೆ ನಡೆಸಲಾಗುತ್ತದೆ. ಮೇ ೧೫ ರಂದು ಮಂಗಳೂರು, ಬೆಳಗಾವಿಯಲ್ಲಿ, ಮೇ ೧೬ ರಂದು ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಮೇ೧೮ ರಿಂದ ೨೩ ರವರೆಗೆ ಮಂಡಲ ಮಟ್ಟದಲ್ಲಿ ತಿರಂಗ ಯಾತ್ರೆ ನಡೆಸಲಾಗುತ್ತದೆ ಎಂದರು.