ತುರ್ತುಪರಿಸ್ಥಿತಿ ಹೇರಿ ಜನರ ಮೂಲಭೂತ ಹಕ್ಕು ಕಸಿದ ಕಾಂಗ್ರೆಸ್: ಗುಜರಾತ್ ಶಾಸಕ ಡಾ. ವಾಝಾ

ಹೊಸದಿಗಂತ ವರದಿ, ಮಡಿಕೇರಿ:

ಸಂವಿಧಾನ ಬದಲಾಯಿಸಲು ಮುಂದಾಗಿದೆ ಎನ್ನುವ ವೃಥಾ ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡಲಾಗುತ್ತಿದೆ. ಆದರೆ, ದೇಶದಲ್ಲಿ ‘ಎಮರ್ಜೆನ್ಸಿ’ ಘೋಷಿಸುವ ಮೂಲಕ ಜನರ ಮೂಲಭೂತ ಹಕ್ಕುಗಳನ್ನು ಕಸಿದು ಸಂವಿಧಾನಕ್ಕೆ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಗುಜರಾತ್ ಶಾಸಕ ಡಾ. ಪ್ರದ್ಯುಮಾನ್ ವಾಝಾ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರಲಾಗುತ್ತದೆಯೇ ಹೊರತು, ಅದನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ. ಹೀಗಿದ್ದೂ, ಬಿಜೆಪಿ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್‍ನ ಸುದೀರ್ಘ ಆಡಳಿತದ ಅವಧಿಯಲ್ಲಿ ಸಂವಿಧಾನಕ್ಕೆ 100ಕ್ಕೂ ಹೆಚ್ಚಿನ ತಿದ್ದುಪಡಿಗಳನ್ನು ತರಲಾಗಿದೆಯೆಂದು ಅವರು ಮಾಹಿತಿ ನೀಡಿದರು.

ಸಂವಿಧಾನ ಬದ್ಧವಾಗಿ ರಚನೆಯಾದ ಸರ್ಕಾರಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ 30 ಬಾರಿ ವಜಾಗೊಳಿಸಿ ಸಂವಿಧಾನದ ಮೂಲ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆಯೆಂದು ಹೇಳಿದ ಅವರು, ಟೀಕಿಸುವ ಭರದಲ್ಲಿ ತೋರು ಬೆರಳು ಮಾತ್ರ ಮುಂದಿರುತ್ತದೆ, ಮೂರು ಬೆರಳುಗಳು ನಿಮ್ಮತ್ತಲೇ ತಿರುಗಿರುತ್ತದೆ ಎನ್ನುವುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕೆಂದು ತೀಕ್ಷ್ಣವಾಗಿ ನುಡಿದರು.

 ಜನ ಮೆಚ್ಚಗೆಗೆ ಪಾತ್ರರು:

ಕೊಡಗಿನ ಮಡಿಕೇರಿ ಕ್ಷೇತ್ರದಿಂದ ಆರು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿರುವ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಐದು ಬಾರಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಅವರು ಜನಮೆಚ್ಚುಗೆಗೆ ಪಾತ್ರವಾಗಿಯೇ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಬಾರಿಯೂ ಇವರು ಜನಾಶೀರ್ವಾದವನ್ನು ಪಡೆಯಲಿದ್ದಾರೆಂದು ದೃಢವಾಗಿ ನುಡಿದರು.

ಗೌರವಾರ್ಪಣೆ- ದಲಿತರ ಮನೆಯಲ್ಲಿ ಭೋಜನ: ಬಿಜೆಪಿ ರೈತ ಮೋರ್ಚಾ ಪ್ರಮುಖರಾದ ಡಾ.ಬಿ.ಸಿ. ನವೀನ್ ಮಾತನಾಡಿ, ಡಾ. ಪ್ರದ್ಯುಮಾನ್ ವಾಜ್ ಅವರು, ಬುಧವಾರ ಬೆಳಗ್ಗೆ ಮಂಗಳಾದೇವಿನಗರ, ಅಶೋಕಪುರ ವಿಭಾಗಗಳಿಗೆ ಭೇಟಿ ನೀಡಿ ದಲಿತರ ಮನೆಗಳಲ್ಲಿ ಭೋಜನ ಸ್ವೀಕರಿಸಿದ್ದು, ನಗರದ ಫೀ.ಮಾ.ಕಾರ್ಯಪ್ಪ, ಜ.ತಿಮ್ಮಯ್ಯ ಸೇರಿದಂತೆ ವೀರ ಯೋಧರ ಪ್ರತಿಮೆಗಳಿಗೆ ಗೌರವಾರ್ಪಣೆ ಮಾಡಿರುವುದಾಗಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಎಂಎಲ್‍ಸಿ ಸುನಿಲ್ ಸುಬ್ರಮಣಿ, ಪಕ್ಷದ ವಕ್ತಾರ ಮಹೇಶ್ ಜೈನಿ, ಪಕ್ಷದ ಪ್ರಮುಖರಾದ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!