ಹೊಸದಿಗಂತ ವರದಿ, ದಾವಣಗೆರೆ
ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಅಲ್ಪಸಂಖ್ಯಾತರ ಜಪ ಮಾಡುತ್ತಿರುವ ಕಾಂಗ್ರೆಸ್ ಬರುವ ಲೋಕಸಭಾ ಚುನಾವಣೆಯಲ್ಲಿ ಧೂಳೀಪಟವಾಗಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಗರದ ಕೆಬಿ ಬಡಾವಣೆಯ ತಮ್ಮ ನಿವಾಸದಲ್ಲಿ ಮಂಗಳವಾರ ಜನ್ಮದಿನ ಆಚರಿಸಿಕೊಂಡ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರಗೆ ಶುಭಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ರಾಮನ ಜಪ ಮಾಡುವಂತೆ ಹೇಳಿದರೆ ಅಲ್ಲಾಹ್ ಜಪ ಮಾಡುತ್ತಾರೆ. ಅಂತಾರೆ. ನಾವು ಅಲ್ಲಾಹ್ ವಿರೋಧಿಗಳಲ್ಲ. ಶ್ರೀರಾಮಚಂದ್ರನ ಕರ ಸೇವಕರು, ರೈತರು, ಮಹಿಳೆಯರ ಶಾಪದಿಂದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಅದು ಲೋಕಸಭೆ ಚುನಾವಣೆಗೆ ಮುನ್ನವೋ ಆನಂತರವೋ ಎಂಬುದನ್ನು ಕಾದು ನೋಡಿ. ಬಿಜೆಪಿ-ಜೆಡಿಎಸ್ ಮೈತ್ರಿ ಅಲೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳನ್ನು ನಾವು ಗೆಲ್ಲಲ್ಲಿದ್ದು, ಕಾಂಗ್ರೆಸ್ ಪಕ್ಷ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರು.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂಬುದನ್ನು ಇಡೀ ವಿಶ್ವವೇ ಬಯಸಿದೆ. ಈ ನಿಟ್ಟಿನಲ್ಲಿ ರಾಜ್ಯದಿಂದ 28 ಕ್ಷೇತ್ರಗಳನ್ನು ಮೋದಿಯವರಿಗೆ ಕಾಣಿಕೆಯಾಗಿ ನೀಡಲು ನಮ್ಮ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧರಿಸಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ರಾಷ್ಟ್ರಮಟ್ಟದಲ್ಲಿ ಆಗಿದ್ದು, ಸೀಟು ಹೊಂದಾಣಿಕೆ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರ ನಿರ್ಧಾರವೇ ಅಂತಿಮ. ಏನೇ ಆದರೂ 28 ಕಾಲಿಪೀಲಿ ಪಕ್ಷಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ನೇತೃತ್ವದಲ್ಲಿ ಮಾಡಿಕೊಂಡಿರುವ ಐ.ಎನ್.ಡಿ.ಐ.ಎ ಕೂಟ ಯಶಸ್ವಿಯಾಗುವುದಿಲ್ಲ ಎಂದು ಅವರು ನುಡಿದರು.
ಹಾಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಈಗಾಗಲೇ ನಾಲ್ಕು ಬಾರಿ ದಾವಣಗೆರೆ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದ್ದರಿಂದ ಈ ಸಲ ದಾವಣಗೆರೆ ಜಿಲ್ಲೆಯವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮೆಲ್ಲಾ ಕಾರ್ಯಕರ್ತರು ಹಾಗೂ ಮತದಾರರ ಆಶಯವಾಗಿದೆ. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ತಿಳಿಸಲು ಪ್ರಯತ್ನಿಸುತ್ತೇವೆ. ಸೂಕ್ತ ರೀತಿಯಲ್ಲಿ ಸಮೀಕ್ಷೆ ಕೈಗೊಂಡು ಸಮರ್ಥ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಬೇಕು. ಅಂತಹವರ ಪರ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಈಗಾಗಲೇ ಒಡೆದ ಮನೆಯಾಗಿದೆ. ಜನರ ತೆರಿಗೆ ಹಣದಲ್ಲಿ ನಿಗಮ-ಮಂಡಳಿ ಅಧ್ಯಕ್ಷರಿಗೆ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಿಗೆ ಕಚೇರಿ, ಕಾರು, ವೇತನ, ಭತ್ಯೆ ನೀಡಲು ಹೊರಟಿದ್ದಾರೆ. ಎಲ್ಲಾ ಅತೃಪ್ತ ಶಾಸಕರಿಗೆ ಪುನರ್ವಸತಿ ಕೇಂದ್ರ, ಗಂಜಿ ಕೇಂದ್ರ ತೆರೆಯುತ್ತಿದ್ದಾರೆ. ಐದೂ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ನೂರಕ್ಕೆ ನೂರರಷ್ಟು ವಿಫಲರಾಗಿದ್ದಾರೆ. ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದೆ ಯೋಜನೆಗಳ ಪರಿಶೀಲನೆಗೆ ಸಮಿತಿ ರಚಿಸುವುದಾದರೆ ಅಧಿಕಾರಿಗಳಿಗೆ ವೇತನ ಕೊಡುವುದಾದರೂ ಏಕೆ? ಎಂದು ಅವರು ಇದೇ ವೇಳೆ ಖಾರವಾಗಿ ಪ್ರಶ್ನಿಸಿದರು.