ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಜಿಬಿಎ (GBA) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಐದೂ ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ಸರ್ಕಾರ ಮತ್ತು ಪಕ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಎರಡು ಪಕ್ಷಗಳ ನಡುವೆ ಮೊದಲಿನಿಂದಲೂ ಹೊಂದಾಣಿಕೆ ಇದೆ, ಇದು ನಮಗೆ ಹೊಸದೇನಲ್ಲ. ಅವರು ಮೈತ್ರಿ ಮಾಡಿಕೊಂಡರೆ ನಮ್ಮ ಗೆಲುವಿಗೆ ಯಾವುದೇ ಅಡ್ಡಿಯಾಗುವುದಿಲ್ಲ” ಎಂದು ಸವಾಲು ಹಾಕಿದರು.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಲೀಸ್ ಬೇಸ್ಡ್ ಸಿಎಂ’ ಎಂದು ಕರೆದಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಜಾರ್ಜ್, “ಕುಮಾರಸ್ವಾಮಿ ಅವರೇ ಈ ಹಿಂದೆ ಲೀಸ್ ಆಧಾರಿತ ಸಿಎಂ ಆಗಿದ್ದರು. ಐದು ವರ್ಷಕ್ಕೆಂದು ಅಧಿಕಾರ ಹಿಡಿದು ಒಂದೇ ವರ್ಷಕ್ಕೆ ನಿರ್ಗಮಿಸಿದ ಅನುಭವ ಅವರದು. ಬಿಜೆಪಿಯಲ್ಲೂ ಮುಖ್ಯಮಂತ್ರಿಗಳಿಗೆ ಅಂತಹದ್ದೇ ಅನುಭವವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಅಂತಹ ಪರಿಸ್ಥಿತಿ ಇಲ್ಲ” ಎಂದು ಸ್ಪಷ್ಟಪಡಿಸಿದರು.


