ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಬಿಬಿಎಂಪಿಯನ್ನು ಎಟಿಎಂ ಮಾಡಲು ಕಾಂಗ್ರೆಸ್ ಸರಕಾರ ಯತ್ನಿಸುತ್ತಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಆಕ್ಷೇಪಿಸಿ ರಾಜ್ಯಪಾಲರಿಗೆ ಇಂದು ದೂರು ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಮಹಾನಗರಪಾಲಿಕೆಯನ್ನು ಕಾಂಗ್ರೆಸ್ ಕಚೇರಿ ಮಾಡಲು ಕಾಂಗ್ರೆಸ್ ಪಕ್ಷದವರು, ಸಚಿವರಾದ ಡಿ.ಕೆ.ಶಿವಕುಮಾರ್, ಜಾರ್ಜ್, ಜಮೀರ್ ಮತ್ತಿತರರು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ನಮ್ಮ ಸಂಸದರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ತೇಜಸ್ವಿ ಸೂರ್ಯ ಅವರನ್ನು ಕರೆಯದೆ ಯಾವುದೋ ರಾಜ್ಯದಿಂದ ಚುನಾಯಿತರಾದ ಸುರ್ಜೇವಾಲರನ್ನು ಕರೆದು ಸಭೆ ನಡೆಸಿದ್ದಾರೆ. ವಾರ್ಡ್ ವಿಂಗಡಣೆ, ಅಭಿವೃದ್ಧಿ, ಚುನಾವಣೆ, ಮೀಸಲಾತಿ, ವಾರ್ಡ್‍ಗಳಿಗೆ ಅನುದಾನ ಮತ್ತಿತರ ವಿಚಾರಗಳ ಕುರಿತು ಅವರು ಚರ್ಚಿಸುವುದಾದರೆ ಯಾಕೆ ಮತದಾನ ಬೇಕು? ಯಾಕೆ ಚುನಾಯಿತ ಪ್ರತಿನಿಧಿಗಳು ಬೇಕು? ಎಂದು ಪ್ರಶ್ನಿಸಿದರು.
ಯಾರು ಸಭೆ ಮಾಡಬೇಕೆಂದು ಸರಕಾರದ ಮಾರ್ಗದರ್ಶಿ ಸೂತ್ರಗಳಿವೆ. ಅದು ಕನ್ನಡದಲ್ಲೇ ಇದೆ ಎಂದ ಅವರು, ‘ಆಯಾ ಸಮಿತಿಯ ಕಾರ್ಯವ್ಯಾಪ್ತಿಗೆ ಒಳಪಟ್ಟು ಸಮೀಕ್ಷಣಾ ಸಭೆಗಳನ್ನು ನಡೆಸಬಹುದು. ಇದನ್ನು ಹೊರತುಪಡಿಸಿ ಶಾಸಕರೇ ಆಗಲಿ; ಇತರ ಖಾಸಗಿ ಪ್ರಮುಖರೇ ಆಗಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮೀಕ್ಷಾ ಸಭೆಗಳನ್ನು ನಡೆಸುವಂತಿಲ್ಲ. ವಿರೋಧ ಪಕ್ಷದ ನಾಯಕರಿಗೂ ಸಹ ಅಧಿಕಾರಿಗಳ ಸಭೆ ನಡೆಸುವ ಅವಕಾಶ ಇಲ್ಲ’ ಎಂದು ಆದೇಶದ ವಿವರ ನೀಡಿದರು.
ಅಂಥ ಸಭೆಗಳನ್ನು ನಡೆಸಲು ಸಚಿವರಿಗೆ, ಅಧಿಕಾರಿಗಳಿಗೆ ಅವಕಾಶ ಇದೆ ಎಂದು ತಿಳಿಸಿದರು. ಇವರು ಯಾವ ಸಚಿವರು? ಕೆಡಿಪಿ ಸಭೆ ನಡೆಸುವ ಉಸ್ತುವಾರಿಯನ್ನೂ ಇವರಿಗೆ ಕೊಟ್ಟಿಲ್ಲ. ಇವರಿಗೆ ಇಲ್ಲಿನ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸ ಇಲ್ಲದಂತಿದೆ. ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ನೇರವಾಗಿ ಇವರೇ ಫೀಲ್ಡಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿ, ಅಮಿತ್ ಶಾ ಅವರು ಹೇಳಿದಂತೆ ‘10, ಜನಪಥವು ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹೊರಟಿದೆ’ ಎಂದು ಆರೋಪಿಸಿದರು. ಮುಖ್ಯ ಕುರ್ಚಿಯಲ್ಲಿ ಕುಳಿತು ಅಧಿಕಾರಿಗಳಿಗೆ ಸುರ್ಜೇವಾಲಾ ಸೂಚನೆ ಕೊಟ್ಟಿದ್ದಾರೆ. 28 ಶಾಸಕರು, 4 ಸಂಸದರಿಗೆ ಬೆಲೆ ಇಲ್ಲವೇ? ಎಂದು ಕೇಳಿದರು. ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ವಿವರ ನೀಡಿದರು.
ಮಾಜಿ ಸಚಿವ ಸುರೇಶ್‍ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಕೆ.ಸಿ.ರಾಮಮೂರ್ತಿ, ಎಂ.ಕೃಷ್ಣಪ್ಪ, ರಘು, ರವಿಸುಬ್ರಹ್ಮಣ್ಯ ಮತ್ತಿತರರು ಇದ್ದರು ಎಂದು ತಿಳಿಸಿದರು. ಸಭೆಗೆ ತೆರಳಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಇರೋದು ನಾಲ್ಕೇ ದಿನ
ಕಾಂಗ್ರೆಸ್‍ಗೆ ಪಕ್ಷಕ್ಕೆ ಅಧಿಕಾರದ ಮದ, ಪಿತ್ಥ ತಲೆಗೇರಿದೆ. ಇರೋದು ನಾಲ್ಕೇ ದಿನ. ಯಾರೂ ಪರ್ಮನೆಂಟಲ್ಲ. ಕಾಂಗ್ರೆಸ್ ಪಕ್ಷ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಆರ್.ಅಶೋಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಭೆ ನಡೆಸಿದ್ದಕ್ಕೆ ದಾಖಲೆಗಳಿವೆ. ಸುಮ್ಮನೆ ಬಂದು ಹೋದರು ಎನ್ನಲು ಇದೇನು ನಾಟಕದ ಕಂಪೆನಿಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಕರ್ನಾಟಕದ ಎಟಿಎಂ ಆರಂಭವಾಗಿದೆ. ಕರ್ನಾಟಕ ಇನ್ಮೇಲೆ ದಿವಾಳಿ ಆಗಲಿದೆ ಎಂದು ತಿಳಿಸಿದ ಅವರು, ಇನ್ಮೇಲೆ ಏನೇ ಮಾಡಲು ಆಗದಿದ್ದರೂ ಕೇಂದ್ರ ಸರಕಾರದತ್ತ ತೋರಿಸುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.