ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್ ಸರ್ಕಾರ ನ್ಯಾಯ ನೀಡಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ಬಳಿ ನ್ಯಾಯ ಕೇಳಲು ಬಳ್ಳಾರಿಗೆ ಬಂದಿದ್ದೇವೆ. ಎರಡೂವರೆ ವರ್ಷದಿಂದ ಯಾರು ಆಡಳಿತ ನಡೆಸುತ್ತಿದ್ದಾರೆ ಎಂದು ಗೊತ್ತಾಗಿಲ್ಲ. ಗೃಹ ಸಚಿವರು ಯಾರೆಂದು ಇನ್ನೂ ತಿಳಿದಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ಕೊಡಲು ಮಾತ್ರ ಸೀಮಿತವಾಗಿದ್ದಾರೆ. ಉಳಿದಂತೆ ಪ್ರತಿ ಜಿಲ್ಲೆಗಳಲ್ಲಿ ಪ್ರತ್ಯೇಕ ಗೃಹ ಸಚಿವರಿದ್ದಾರೆ. ಕಾಂಗ್ರೆಸ್ ನಾಯಕರಿಂದಾಗಿ ಅಮಾಯಕ ಕಾರ್ಯಕರ್ತ ಬಲಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ ಎಂದರು.
ಜನವರಿ 1ರಂದು ಎಲ್ಲ ಕಡೆ ಹೊಸ ವರ್ಷದ ಆಚರಣೆಗಾಗಿ ಪಟಾಕಿ ಸಿಡಿಯುತ್ತಿದ್ದರೆ, ಬಳ್ಳಾರಿಯಲ್ಲಿ ಗುಂಡಿನ ಸುರಿಮಳೆ ಆಗುತ್ತಿತ್ತು. ಗುಂಡು ಹಾರಿಸಿದವರು ಯಾರೆಂದು ಪೊಲೀಸರಿಗೆ ಇನ್ನೂ ಗೊತ್ತಿಲ್ಲ. ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಕಡೆಯವರಿಂದ ಗುಂಡು ಹಾರಿದ್ದರೆ ಪೊಲೀಸರು ಪ್ರತಿ ಮನೆಗೆ ಬಂದು ಲಾಠಿ ಏಟು ಕೊಟ್ಟು ಎಲ್ಲರನ್ನೂ ಬಂಧಿಸುತ್ತಿದ್ದರು. ಕಾಂಗ್ರೆಸ್ ಕಡೆಯವರೇ ಆಗಿರುವುದರಿಂದ ಕೊಲೆ ಮಾಡಿದವರನ್ನು ಇನ್ನೂ ಬಂಧನ ಮಾಡಿಲ್ಲ. ಗುಂಡು ಹಾರಿಸಿದ್ದ ಗನ್‌ಮ್ಯಾನ್‌ನನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ. ಈ ಬಗ್ಗೆ ನಾನು ವಿಚಾರಿಸಿದಾಗ ಅಚಾನಕ್ಕಾಗಿ ಗುಂಡು ಹಾರಿದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ ಗುಂಡು ಹಾರಿಸಿದರೆ ಪೊಲೀಸರು ಬಿಟ್ಟುಬಿಡುತ್ತಾರೆಯೇ? ಈಗ ಕೊಲೆಗಾರರು ಬೆಂಗಳೂರಿನಲ್ಲಿ ಆರಾಮವಾಗಿ ಇದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.


