ದಲಿತರ ಮೇಲೆ ದುಷ್ಟದೃಷ್ಟಿ ಬೀರುವ ಕಾಂಗ್ರೆಸ್ ಸರಕಾರ: ಬೊಮ್ಮಾಯಿ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ದಲಿತರನ್ನು ಮತಬ್ಯಾಂಕಾಗಿ ಪರಿಗಣಿಸಿದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುತ್ತಿದೆ. ಇದು ದುಷ್ಟ ದೃಷ್ಟಿಯ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದರು.

ದಲಿತರ ಕಲ್ಯಾಣಕ್ಕಾಗಿ ನೀಡಿದ ಅನುದಾನದಲ್ಲಿ 11 ಸಾವಿರ ಕೋಟಿಯನ್ನು ಕಿತ್ತು ಕಾಂಗ್ರೆಸ್ ಸರಕಾರವು ಅವರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬಿಜೆಪಿಯ ರಾಜ್ಯ ಮತ್ತು ಬೆಂಗಳೂರು ಮಹಾನಗರ ಎಸ್‍ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರವು ದಲಿತರ ಕಲ್ಯಾಣದ ವಿಚಾರದಲ್ಲಿ ಕಣ್ಣುಮುಚ್ಚಾಲೆ ಮಾಡುತ್ತಿದೆ. ಇದು ಆಕ್ರೋಶದ ದಿನ. ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಕೊಟ್ಟಾಗ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ ಹಣವನ್ನು ಗ್ಯಾರಂಟಿಗಾಗಿ ಬಳಸುವುದಾಗಿ ತಿಳಿಸಬೇಕಿತ್ತು. ಆದರೆ, ಅದನ್ನು ಮಾಡದೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

52 ಸಾವಿರ ಕೋಟಿ ಕೊಟ್ಟು ಗ್ಯಾರಂಟಿ ಅನುಷ್ಠಾನಕ್ಕೆ ಹಣ ಹೊಂದಿಸಲಾಗುತ್ತಿಲ್ಲ. ರಾಜ್ಯವನ್ನು ದಿವಾಳಿಯ ಅಂಚಿಗೆ ಒಯ್ಯಲಾಗುತ್ತಿದೆ. ನಮ್ಮದು ಮಿಗತೆ ಬಜೆಟ್. ನಿಮ್ಮದು 12 ಸಾವಿರ ಕೋಟಿ ಕೊರತೆ ಬಜೆಟ್. ಗ್ಯಾರಂಟಿಗೆ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ ಹಣ ನೀಡಲಾಗುತ್ತಿದೆ. 11 ಸಾವಿರ ಕೋಟಿ ಹಣವನ್ನು ತಳವರ್ಗದ ದಲಿತರಿಗೆ ಮೀಸಲು ಹಣವನ್ನು ಕೊಡುವುದು ಘೋರ ಅನ್ಯಾಯ ಎಂದು ಆಕ್ಷೇಪಿಸಿದರು.

34 ಸಾವಿರ ಕೋಟಿಯಲ್ಲಿ 11 ಸಾವಿರ ತೆಗೆದರೆ 23 ಸಾವಿರ ಕೋಟಿ ಮಾತ್ರ ವಿನಿಯೋಗ ಆಗಲಿದೆ. ಗೃಹಿಣಿಯರಿಗೆ 2 ಸಾವಿರ ರೂಪಾಯಿ ವಿಚಾರಕ್ಕೆ 5,500 ಕೋಟಿಯನ್ನು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯಿಂದ ನೀಡಿದ್ದಾರೆ. 11 ಸಾವಿರ ಕೋಟಿಯಿಂದ ದಲಿತರ ಅಭಿವೃದ್ಧಿ ಸಾಧ್ಯವಿತ್ತು. ದಲಿತರಿಗೆ ಮನೆ, ಹಾಸ್ಟೆಲ್, ವಿದ್ಯಾರ್ಥಿಗಳಿಗೆ ಶಿಕ್ಷಣ, ಜಾಗ ಖರೀದಿಗೆ ಅದನ್ನು ಬಳಸಬಹುದಿತ್ತು ಎಂದು ನುಡಿದರು.

ಹಿಂದಿನ ಕಾಂಗ್ರೆಸ್ ಸರಕಾರವೂ ಈ ವಿಷಯದಲ್ಲಿ ಮೋಸ ಮಾಡಿತ್ತು. 7 ಡಿ ಮೂಲಕ ಬೇರೆ ಉದ್ದೇಶಕ್ಕೆ ಹಣ ಬಳಸಲಾಗಿತ್ತು ಎಂದು ಅವರು ಟೀಕಿಸಿದರು. ನಾವು 5 ಮೆಗಾ ಹಾಸ್ಟೆಲ್ ನಿರ್ಮಿಸಿದ್ದೇವೆ. ಬಾಬು ಜಗಜೀವನ್‍ರಾಂ ಹೆಸರಿನ ನಮ್ಮ ಯೋಜನೆಗಳನ್ನು ಗಾಳಿಗೆ ತೂರಿದ್ದೀರಿ. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿ ವಿಚಾರದಲ್ಲೂ ಅನ್ಯಾಯ ಆಗಿದೆ ಎಂದು ತಿಳಿಸಿದರು. ನಿಮಗೆ ಬದ್ಧತೆ ಇದ್ದರೆ 7 ಡಿ ಕ್ಲಾಸ್ ತೆಗೆಯಬೇಕಿತ್ತು ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ರದ್ದತಿ, ಮತಾಂತರ ನಿಷೇಧ ರದ್ದತಿಗೆ ನಿಮಗೆ ಟೈಮಿದೆ. ದಲಿತರ ಪರವಾಗಿ 7 ಡಿ ರದ್ದತಿ ಘೋಷಣೆಯಾಗಿಯೇ ಉಳಿದಿದೆ. ದೋಖಾ ಮಾಡುವ, ದ್ರೋಹದ ಯೋಜನೆ ನಿಮ್ಮದಾಗಿತ್ತು. ನಿಮ್ಮ ಬಣ್ಣ ಬಯಲಾಗಿದೆ ಎಂದು ದೂರಿದರು. ದಲಿತರ ಪರ ನಿಲ್ಲಲು ನಿಮಗೆ ಬೆನ್ನೆಲುಬಿಲ್ಲವೇ? ದಲಿತರ ಪರ ಧ್ವನಿ ಇಲ್ಲವೇ? ಎಂದು ಟೀಕಿಸಿದರು.

ಗೃಹ ಲಕ್ಷ್ಮಿ ಸೇರಿ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಲಾಗುತ್ತಿದೆ. ಯುವಕರು, ಮಹಿಳೆಯರಿಗೆ ಮೋಸ ಮಾಡಿದ್ದು, ರೈತರನ್ನು ತುಳಿದುಹಾಕಿದ್ದಾರೆ. ರೈತ ವಿದ್ಯಾನಿಧಿ ಬಂದ್ ಆಗಿದೆ. ಕಿಸಾನ್ ಸಮ್ಮಾನ್ 4 ಸಾವಿರ ಹಣ ರದ್ದಾಗಿದೆ. ರೈvರುÀ, ಮಹಿಳೆಯರು, ದಲಿತರು, ವಿದ್ಯಾರ್ಥಿಗಳ ವಿರೋಧಿ ಸರಕಾರ ಇಲ್ಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 11 ಸಾವಿರ ಕೋಟಿ ರೂಪಾಯಿಯನ್ನು ಮತ್ತೆ ಅದೇ ಖಾತೆಗೆ ಕೊಡಿ. ಗ್ಯಾರಂಟಿಗೆ ಬೇರೆ ಕಡೆಯಿಂದ ಹಣ ಹೊಂದಿಸಿ ಎಂದು ಆಗ್ರಹಿಸಿದರು.

ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ನೀಡಲು ವರ್ಗಾಯಿಸಿದ್ದು ಖಂಡನೀಯ ಎಂದು ಟೀಕಿಸಿದರು. 7 ಡಿ ಇಟ್ಟು, ಅದನ್ನು ವಾಪಸ್ ಪಡೆಯಲೇ ಇಲ್ಲ ಎಂದು ಕಿಡಿಕಾರಿದರು.
11 ಸಾವಿರ ಕೋಟಿಯನ್ನು ಗ್ಯಾರಂಟಿಗೆ ಕೊಡುವುದಾಗಿ ಮಹದೇವಪ್ಪ, ಪ್ರಿಯಾಂಕ್ ಖರ್ಗೆಯವರ ಉಪಸ್ಥಿತಿಯಲ್ಲೇ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಇದೀಗ ಮತ್ತೆ ಆ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಕಾಂಗ್ರೆಸ್ಸಿಗರು ಚುನಾವಣೆ ನಂತರ ಗ್ಯಾರಂಟಿ ಲಂಚ ನೀಡುವ ಭರವಸೆ ಕೊಟ್ಟಿದ್ದರು ಎಂದು ಟೀಕಿಸಿದರು.

ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ಸಿದ್ದರಾಮಯ್ಯನವರು ದಲಿತ ವಿರೋಧಿ, ಮೋಸ ಮಾಡುವವರು. ಸಿದ್ದರಾಮಯ್ಯನವರು ನಾಟಕಗಳನ್ನು ಬಿಡಲಿ. ನಮ್ಮ ದುಡ್ಡಿಗೆ ಕೈ ಹಾಕದಿರಲಿ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯನವರು ದಲಿತ ಸಚಿವರ ಬೆರಳಿನ ಮೂಲಕ ಅವರದೇ ಕಣ್ಣಿಗೆ ಚುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ದಲಿತ ಸಚಿವರು ರಾಜೀನಾಮೆ ಕೊಟ್ಟು ಸರಕಾರದಿಂದ ಹೊರಕ್ಕೆ ಬರಲಿ ಎಂದು ಅವರು ಆಗ್ರಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ದಲಿತರ ವಿಚಾರಕ್ಕೆ ಬಂದರೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳು, ಎಸ್‍ಸಿ ಮೋರ್ಚಾ ಪದಾಧಿಕಾರಿಗಳು, ಸದಸ್ಯರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!