ಹೊಸದಿಗಂತ ವರದಿ ಕಲಬುರಗಿ:
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಭರವಸೆಗಳು ಫಲ ನೀಡಿದ್ದು, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾನುವಾರ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ಮತ್ತು ಛತ್ತೀಸಗಢ ದಲ್ಲಿ ಅಧಿಕಾರದೆಡೆ ಮುನ್ನುಗ್ಗುತ್ತಿದ್ದು, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸ್ವಲ್ಪ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ ಎಂದರು.
ತೆಲಂಗಾಣ ರಾಜ್ಯದಲ್ಲಿ ಬಿ.ಆರ್.ಎಸ್.ಸರಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದಿಂದ ಹಿನ್ನಡೆಯಾಗಿದ್ದು, ಅಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಭರವಸೆಗಳು ಫಲಪ್ರದವಾಗಿವೆ. ಸಮಾಜವನ್ನು ಜೋಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.
ಜಾತಿ ಜಾತಿಗಳ ನಡುವೆ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಅವರು ಮಾಡಿದ್ದು,ಅಧಿಕಾರ ಯಾರಿಗೂ ಶಾಶ್ವತವಲ್ಲ.ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ಬಿಜೆಪಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ರಾಜ್ಯ ಚುನಾವಣೆಗಳೆ ಬೇರೆ, ರಾಷ್ಟ್ರ ಚುನಾವಣೆಗಳೆ ಬೇರೆಯಾಗಿರಲಿವೆ.ಹೀಗಾಗಿ ಲೋಕಸಭಾ ಚುನಾವಣೆಗೆ ಪಂಚ್ ರಾಜ್ಯಗಳ ಚುನಾವಣೆ ಫಲಿತಾಂಶ ದಿಕ್ಸೂಚಿ ಎಂದು ಹೇಳಲು ಸಾಧ್ಯವಿಲ್ಲ ಎಂದ ಅವರು, ಆಪರೇಷನ್ ಕಮಲದ ಭಯ ನಮಗಿಲ್ಲ.ಆದರೆ,ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಾಗಿದೆ. ಬಿಜೆಪಿ ಪಕ್ಷದವರ ತೋಳ್ಬಲ,ಹಣ ಬಲ, ಸಿಐಡಿ,ಇಡಿ ಬಳಕೆ ಮಾಡುತ್ತಾರೆ.ಹೀಗಾಗಿ ನಮ್ಮ ಶಾಸಕರನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಿದೆ ಎಂದು ಹೇಳಿದರು.