ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ವಿಶ್ವವಿಖ್ಯಾತ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಈ ಬಾರಿ ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸ್ಥಬ್ದ ಚಿತ್ರಗಳ ಮೆರವಣಿಗೆಯೂ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಲ ಗ್ಯಾರಂಟಿ ಗಳ ಕುರಿತಾದ ಸ್ಥಬ್ದ ಚಿತ್ರಗಳು ಇರಲಿವೆ. ಈ ಸಲ ದಸರಾ ಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತವಾಗಿದೆ. ದಸರಾ ಒಂದು ಪಾರಂಪರಿಕ ಉತ್ಸವ ಆಗಿದೆ. ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು. ದೀಪಾಲಂಕಾರ, ಮೆರವಣಿಗೆ, ಜಂಬೂಸವಾರಿ, ಸ್ಥಬ್ಧ ಚಿತ್ರಗಳ ಮೆರವಣಿಗೆ ಜನರನ್ನು ಬಹಳ ಆಕರ್ಷಿಸುವ ವಿಚಾರಗಳು ನಡೆಯುತ್ತವೆ. ರಾಜ್ಯದ ಪರಂಪರೆ , ಜಿಲ್ಲೆಗಳ ವಿಶೇಷತೆಗಳು, ಹಾಗೂ ನಮ್ಮ 5 ಗ್ಯಾರಂಟಿ ಗಳ ಕುರಿತಾದ ಸ್ಥಬ್ದ ಚಿತ್ರಗಳು ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬ ಆಯ್ಕೆ ನನಗೆ ಜವಾಬ್ದಾರಿ ನೀಡಲಾಗಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಈ ಬಾರಿ ಸುತ್ತೂರು ಸ್ವಾಮಿಗಳ ಹೆಸರು ಸದ್ಯಕ್ಕೆ ಪ್ರಸ್ತಾಪ ಆಗಿದೆ. ಇನ್ನೂ ಚರ್ಚೆ ಹಂತದಲ್ಲಿ ಇದೆ ನೋಡೋಣ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 15ರಂದು ದಸರಾ ಉದ್ಘಾಟನೆ ಆಗಲಿದೆ. ಬೆಳಗ್ಗೆ 10.15ರಿಂದ 10.30ರ ಅವಧಿಯಲ್ಲಿ ದಸರಾವನ್ನು ಉದ್ಘಾಟನೆ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಜೊತೆ ಕನ್ನಡ ಸಂಸ್ಕೃತ ಸಚಿವರೂ ಹಾಗೂ ಪ್ರವಾಸೋದ್ಯಮ ಸಚಿವರೂ ಜೊತೆಗೆ ಇರ್ತಾರೆ. ಈ ಬಾರಿಯ ದಸರಾ ಉತ್ಸವಕ್ಕೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕುರಿತು ಉನ್ನತ ಮಟ್ಟದ ಮಹತ್ವದ ಸಭೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಸಲಾಯಿತು. ಈ ವೇಳೆ ಮೈಸೂರು ದಸರಾ ಯಾರು ಉದ್ಘಾಟನೆ ಮಾಡುವ ಅತಿಥಿ,ಹಾಗೂ ಆಚರಣೆ ಕುರಿತು ಚರ್ಚೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಮೈಸೂರು ದಸರಾ ಮಹೋತ್ಸವದ ಸಮಿತಿ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು.