ಹೊಸದಿಗಂತ ವರದಿ,ಮಡಿಕೇರಿ:
ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳು ಮುಂದಿನ ಸಾಲಿನ ಲೋಕಸಭಾ ಚುನಾವಣೆಯವರೆಗೆ ಮಾತ್ರ ನಡೆಯಲಿವೆ ಎಂದು ಮಾಜಿ ಉಪಮುಖ್ಯ ಉಪ ಮುಖ್ಯಮಂತ್ರಿ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಕೇಂದ್ರದ ಮೋದಿ ಸರ್ಕಾರದ 9 ವರ್ಷಗಳ ಸಾಧನೆಗಳನ್ನು ತಿಳಿಸುವ ಸಂಬಂಧ ನಗರದ ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಮಾತ್ರ ಜಾರಿಯಾಗಿದ್ದು, ಅದೂ ಸಮರ್ಪಕವಾಗಿಲ್ಲ. ಇನ್ನು ಪ್ರತಿ ಮನೆಯ ಮಹಿಳೆಯರಿಗೆ 2 ಸಾವಿರ ರೂ., ನಿರುದ್ಯೋಗಿಗಳಿಗೆ 3 ಸಾವಿರ,ಪ್ರತಿ ಮನೆಗೆ 200 ಯೂನಿಟ್ ಗ್ಯಾರಂಟಿಗಳು ಇನ್ನೂ ಜಾರಿಯಾಗಿಲ್ಲ. ಇವೆಲ್ಲ ಗೊಂದಲದ ಗೂಡಾಗಿದೆಯೆಂದು ಟೀಕಿಸಿದರು.
ಜನರಿಗೆ ತಿಳಿಯುವಂತಾಯಿತು: ಪ್ರತಿ ಪಡಿತರ ಚೀಟಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ನಿಡಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಸಿದ್ದರಾಮಯ್ಯ ಅವರ ಈ ಅಕ್ಕಿ ಯೋಜನೆಯಿಂದ ಇಲ್ಲಿಯವರೆಗೆ ಪಡಿತರದಾರರಿಗೆ ದೊರಕುತ್ತಿದ್ದ 5 ಕೆ.ಜಿ. ಅಕ್ಕಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ನೀಡುತ್ತಿದ್ದುದು ಎನ್ನುವುದು ಜನರಿಗೆ ತಿಳಿಯುವಂತಾಗಿದೆಯೆಂದು ತೀಕ್ಷ್ಣವಾಗಿ ನುಡಿದರು.
ಈ ಸರ್ಕಾರ ಉಳಿಯುವುದಿಲ್ಲ: ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಮೋಸವೆಸಗುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಲೋಕ ಸಭಾ ಚುನಾವಣೆಯ ಬಳಿಕ ಬಿದ್ದು ಹೋಗುತ್ತದೆ ಎಂದು ಆರ್. ಅಶೋಕ್ ಇದೇ ಸಂದರ್ಭ ದೃಢವಾಗಿ ನುಡಿದರು.