ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಉತ್ತಮ ಸರ್ಕಾರ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ರೀತಿ ಭಾವಿಸಿದೆ. ಕರ್ನಾಟಕಕ್ಕೆ ಒಳ್ಳೆಯದನ್ನು ಕೇವಲ ಬಿಜೆಪಿ ಮಾತ್ರ ಮಾಡಬಲ್ಲದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಆಯೋಜಿಸಿದ್ದ 4,283 ಕೋಟಿ ರೂ. ವೆಚ್ಚದ 220 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಕಳೆದ ಬಾರಿ ಅತ್ಯಂತ ಕಡಿಮೆ ಶಾಸಕರನ್ನು ಪಡೆದ ಕುಮಾರಸ್ವಾಮಿ, ಕಾಂಗ್ರೆಸ್ ಮಡಿಲಲ್ಲಿ ಕುಳಿತರು. ಈ ಬಾರಿ ಅಂತಹ ತಪ್ಪು ಮಾಡಬೇಡಿ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕೊರೋನಾ ವೇಳೆ ಲಸಿಕೆ ನೀಡಲು ಒಂದೇ ಒಂದು ಪೈಸೆ ಪಡೆದಿಲ್ಲ. ಬಡವರ ಮನೆಗೆ ಉಚಿತವಾಗಿ ತಲಾ 5 ಕೆಜಿ ಅಕ್ಕಿ ನೀಡಿದ್ದೇವೆ. ಸಿಎಂ ಬೊಮ್ಮಾಯಿ ಸರ್ಕಾರ ಲಿಂಗಾಯತರ ಮೀಸಲಾತಿ ಹೆಚ್ಚಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣ ಕೂಡ ಸ್ಥಾಪನೆ ಮಾಡುತ್ತೇವೆ ಎಂದು ಮೋದಿ ಸರಕಾರದ ಸಾಧನೆಗಳನ್ನುಜನತೆ ಮುಂದೆ ಹೇಳಿದರು.
ಈ ದೇಶವನ್ನು ಕಾಂಗ್ರೆಸ್ ಸುರಕ್ಷಿತವಾಗಿ ಇರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಆಲಿಯಾ, ಮಾಲಿಯಾ, ಜಮಾಲಿಯಾ ಬಂದು ನಮ್ಮ ಸೈನಿಕರನ್ನು ಕೊಂದು ಹೋಗುತ್ತಿದ್ದರು. ಸರ್ಕಾರ ಏನೂ ಮಾಡುತ್ತಿರಲಿಲ್ಲ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಪುಲ್ವಾಮಾ ದಾಳಿ ನಡೆಯಿತು. ಕೇವಲ 10ದಿನದಲ್ಲಿ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡಿ ಆತಂಕವಾದಿಗಳನ್ನು ಸಂಹರಿಸಲಾಯಿತು.ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶ ಆಗುತ್ತಿದೆ. ಉತ್ತರ ಭಾರತದಲ್ಲಿ ಮೂರು ಕಡೆ ಎನ್ ಡಿಎ ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್ ಉತ್ತರ ಭಾರತದಲ್ಲಿ ಮುಗ್ಗರಿಸಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಪೂರ್ಣ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.