ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್, ಸರ್ಕಾರ ರಚನೆ ಕಸರತ್ತು ನಡೆಸುತ್ತಿದೆ. ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸುಖ್ವಿಂದರ್ ಸಿಂಗ್ ಸುಖು ಅವರ ಹೆಸರು ಬಹುತೇಕ ಖಚಿತವಾಗಿದೆ.
ನೂತನ ಮುಖ್ಯಮಂತ್ರಿ ಹುದ್ದೆಗೆ ಸುಖ್ವಿಂದರ್ ಸಿಂಗ್ ಸುಖು ಅವರ ಆಯ್ಕೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ನಾಳೆಯೇ ಅವರು ಮುಂದಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸುಖ್ವಿಂದರ್, ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಿಎಂ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬರಲಿದೆ ಎಂದಿದ್ದರು.
ಹಿಮಾಚಲ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿರುವ ಸುಖ್ವಿಂದರ್ ಅವರಿಗೆ ಆಡಳಿತಾತ್ಮಕ ಅನುಭವ ಇಲ್ಲದಿದ್ದರೂ ಪಕ್ಷದ ಪ್ರಮುಖ ರಜಪೂತ ನಾಯಕರಾಗಿದ್ದಾರೆ. ಜೊತೆಗೆ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಅವರು, ಹೈಕಮಾಂಡ್‌ನ ನಿಕಟವರ್ತಿ ಕೂಡ ಆಗಿದ್ದು, ಇದರಿಂದ ಮುಖ್ಯಮಂತ್ರಿ ಪದವಿ ಒಲಿಯಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.