ಹೊಸದಿಗಂತ ವರದಿ, ವಿಜಯಪುರ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಆದರೆ ಡೆಬಿಟ್ ಅಕೌಂಟ್ ನಲ್ಲಿ ಹಣವೇ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ತುಂಬಾ ಒಂದೇ ಒಂದು ಅಭಿವೃದ್ಧಿ ಕಾರ್ಯವಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಸಂಬಳವಿಲ್ಲ. ನಾವು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರ ಪರ ಎಂದು ಸರ್ಕಾರದವರು ಹೇಳುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಇಲ್ಲ. ಗ್ಯಾರಂಟಿಯಿಂದ ನಮಗೆ ಮೋಸ ಮಾಡಿದ್ದೀರಿ ಎಂದು ಮಹಿಳೆಯರೇ ಶಾಪ ಹಾಕುತ್ತಿದ್ದಾರೆ ಎಂದರು.
ಪಟೇಲ ಸಾಹೇಬರು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಂತ್ರಿಗಳಾಗಿ ನಾವು ಕೆಲಸ ಮಾಡಿದ್ದೇವೆ. ಎರಡು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಇವರದ್ದು ಕೇಂದ್ರ ಸರ್ಕಾರದೊಂದಿಗೆ ಒಳ್ಳೆಯ ಸಂಬಂಧ ಕೂಡ ಇಟ್ಟುಕೊಂಡಿಲ್ಲ. ಇವರ ಆಡಳಿತದಿಂದ ನನಗೆ ತುಂಬಾ ನೋವಾಗುತ್ತದೆ. ನಮ್ಮ ಸರ್ಕಾರ ಮಾಡಿರುವ ಕೆಲಸಕ್ಕೆ ಇವರು ಭೂಮಿಪೂಜೆ ಮಾಡುವುದು ಚಾಲನೆ ಕೊಡುವುದು ಮಾಡುತ್ತಾರೆ ಎಂದು ಆರೋಪಿಸಿದರು.
ಕಳೆದ ಎರಡು ವರ್ಷದಿಂದ ಒಂದಾದರೂ ಅಭಿವೃದ್ಧಿ ಕೆಲಸ ಮಾಡಿದ್ದೀರಾ ?, ಹಳ್ಳಿಗಳಲ್ಲಿ ಒಂದೇ ಒಂದು ರಸ್ತೆ ಸರಿಯಾಗಿ ಇಲ್ಲ, ಈ ಸರ್ಕಾರಕ್ಕೆ ಏನೇ ಬೈದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದರು.
ಸಿಎಂ ಅವರ ಕಂಟ್ರೋಲ್ ನಲ್ಲಿ ಶಾಸಕರು, ಸಚಿವರು ಇರಬೇಕು. ಆದರೆ ಸಿಎಂ ಮಾಡುವ ಕೆಲಸ ಸುರ್ಜೇವಾಲಾ ಅವರು ಬಂದು ಶಾಸಕ, ಸಚಿವರೊಟ್ಟಿಗೆ ಮಾತನಾಡುವಂತಹ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ ಎಂದರು.
ಸರ್ಕಾರ ನಡೆಸುವುದು ದೊಡ್ಡ ಕೆಲಸವಲ್ಲ. ದೇಶಕ್ಕೆ ಮಾದರಿಯಾದ ಸರ್ಕಾರ ನಡೆಸಬೇಕು, ದೇವರೇ ಇವರಿಗೆ ಕಾಪಾಡಬೇಕು ಎಂದರು.
ಹಿಂದೆ ನಿಜಲಿಂಗಪ್ಪ ನವರು ರಾಮಕೃಷ್ಣ ಹೆಗಡೆ, ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾದರಿಯಾದ ಕೆಲಸ ಮಾಡಿದ್ದರು. ಆದರೆ ಈ ಸರ್ಕಾರದ ಕೆಲಸದಿಂದ ನನಗೆ ನೋವಾಗಿದೆ ಎಂದರು.
ದೇವರಂತಹ ಮನುಷ್ಯ ಸಿದ್ದರಾಮಣ್ಣ, ಆದರೆ ಈ ಕಾಂಗ್ರೆಸ್ ನವರೊಟ್ಟಿಗೆ ಸೇರಿ ಸತ್ಯಾನಾಶವಾಗಿದ್ದಾನೆ ಎಂದರು.