ಹೊಸ ದಿಗಂತ, ಹಾವೇರಿ:
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಿಗೆ ಎಲ್ಲಿಂದ ಹಣ ಹೊಂದಾಣಿಕೆ ಮಾಡುತ್ತದೆ ಎನ್ನುವ ಕುರಿತು ಶ್ವೇತ ಪತ್ರ ಹೊರಡಿಸಬೇಕು. ಅಂದಾಗ ಮಾತ್ರ ಈ ಐದೂ ಗ್ಯಾರಂಟಿಗಳು ಜಾರಿಗೆ ಆಗುತ್ತವೆ ಎನ್ನುವ ಕುರಿತು ಜನತೆಗೆ ನಂಬಿಕೆ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಹೇಳಿದರು.
ಹಾವೇರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಐದು ಗ್ಯಾರಂಟಿಗಳಿಗೆ ಹಣ ಹೊಂದಾಣಿಕೆ ಮಾಡುವುದಕ್ಕೆ ಉಳಿದೆಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸ್ಥಗಿತಗೊಳಿಸಿದೆ. ಹೊಸ ಯೋಜನೆ ಜಾರಿಗೆ ತರೋ ಪ್ರಶ್ನೆನೇ ಇಲ್ಲ ಅನ್ನುತ್ತಿದ್ದಾರೆ. ಈ ಸರ್ಕಾರ ದಿವಾಳಿಯಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ. ಇಂದು ರಾಜ್ಯದ ಆರ್ಥಿಕತೆ ದೀವಾಳಿ ಆಗಿದೆ ಎಂದು ಆರೋಪಿಸಿದರು.
ನಿರುದ್ಯೋಗಿ ಪದವಿಧರರಿಗೆ 3 ಸಾವಿರ, ಮನೆ ಒಡತಿಗೆ 2 ಸಾವಿರ, 200 ಯುನಿಟ್ ವಿದ್ಯುತ್ ಉಚಿತ ಕೊಡುತ್ತೇವೆ ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದರು, ಜನ ನಂಬಿ ಮತ ಕೊಟ್ಟರು. ಮೊದಲ ಕ್ಯಾಬಿನೆಟ್ನಲ್ಲಿ 5 ಗ್ಯಾರಂಟಿ ಜಾರಿಗೆ ತರುತ್ತೇವೆ ಅಂತ ಹೇಳಿದ್ದಕ್ಕೆ ಜನತೆ ಮತ ನೀಡಿದರು, ಮಾತನ್ನು ಪೂರೈಸಲು ಸಾಧ್ಯವಾಗದಿದ್ದಾಗ ಸರ್ವರ್ ಸಮಸ್ಯೆ ಆದರೆ ಕೇಂದ್ರ ಬಿಜೆಪಿ ಸರ್ಕಾರ ಹ್ಯಾಕ್ ಮಾಡಿದೆ ಅಂತ ಸುಳ್ಳು ಹೇಳ್ತಿದ್ದಾರೆ. ಅಕ್ಕಿ ಕೊಡ್ತಿಲ್ಲ ಅಂತ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ ಜನರಿಗೆ ಮೋಸ ಮಾಡಿದ್ದಾರೆ ಐದೂ ಗ್ಯಾರಂಟಿಗಳನ್ನು ಎಂದು ನೀಡುತ್ತೀರಿ ಎಂದು ಜನತೆಗೆ ಸ್ಪಷ್ಟಪಡಿಸಬೇಕು ಎಂದರು.