ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಾಂಗ್ರೆಸ್ ಸರಕಾರವು 5 ಗ್ಯಾರಂಟಿಗಳ ಹೆಸರಿನಲ್ಲಿ 75 ಸಾವಿರ ಕೋಟಿಯನ್ನು ಜನರಿಂದ ಸುಲಿಗೆ ಮಾಡುತ್ತಿದೆÉ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಅವರೇ ಹೇಳಿದ್ದಾರೆ. ಈಗಾಗಲೇ ಜುಲೈ ಮುಗಿದಿದೆ. 50 ಸಾವಿರ ಕೋಟಿ ಕೊಡಲು ಹೋಗಿ ಜನರಿಗೆ 75 ಸಾವಿರ ಕೋಟಿ ಟೋಪಿ ಹಾಕುವ ಕೆಲಸವನ್ನು ಮಾಡುತ್ತಿದೆ. ಇದು ಖಂಡನೀಯ. ಇಂಥ ಮೋಸದಾಟ ಒಪ್ಪಲಸಾಧ್ಯ ಎಂದು ತಿಳಿಸಿದರು.
ನಿನ್ನೆ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನ ಸಂಬಂಧಿತ ಸಭೆ ಮಾಡಿ, ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂಪಾಯಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಈ ಸಭೆ ಮಾಡಿದ್ದಾರೆ. ಸಂವಿಧಾನದ ಆಶಯ ಏನು? ಈ ದೇಶದಲ್ಲಿರುವ ದೀನದಲಿತರು, ಬಡವರು, ಶಿಕ್ಷಣ ವಂಚಿತರು, ಉದ್ಯೋಗದಲ್ಲಿ ಅವಕಾಶ ವಂಚಿತರು, ಕಡು ಬಡವರನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ಮಾಡಬೇಕು. ಮುಖ್ಯವಾಗಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉದ್ಯೋಗ ನೀಡಿಕೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಅನುದಾನ ಕೊಡಬೇಕೆಂಬುದೇ ಸಂವಿಧಾನದ ಆಶಯ. ನಮ್ಮ ಸರಕಾರ ಇದ್ದಾಗ ಹಿಂದೆಯೂ ಕೂಡ ಗಂಗಾ ಕಲ್ಯಾಣ ಯೋಜನೆ, ಭೂಮಿ ಖರೀದಿ, ಮನೆಗಳ ನಿರ್ಮಾಣ, ಹಾಸ್ಟೆಲ್‍ಗಳು, ವಸತಿಶಾಲೆ ನಿರ್ಮಿಸಲು ಅನುದಾನ ನೀಡಿದ್ದೇವೆ. ಈ ಸರಕಾರ ಹಾಸ್ಟೆಲ್ ನಿರ್ಮಾಣ, ವಸತಿ ಶಾಲೆ ನಿರ್ಮಾಣಕ್ಕೆ ಒಂದೇ ಒಂದು ರೂಪಾಯಿ ಇಟ್ಟಿಲ್ಲ ಎಂದು ಟೀಕಿಸಿದರು.
ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ 24 ಅನುದಾನ ಕೊಡುವ ಶ್ರೇಷ್ಠ ಕೆಲಸ ಮಾಡಿದ್ದಾಗಿ ಸಿದ್ದರಾಮಯ್ಯನವರು ಎದೆ ಬಡಿದುಕೊಳ್ಳುತ್ತಿದ್ದರು. ಅವರು ಮಾಡಿದ್ದಾದರೂ ಏನು ಎಂದು ಕೇಳಿದರು. 156 ವಸತಿ ಶಾಲೆಯ ಕಟ್ಟಡದ ಕಾಮಗಾರಿ ಕಳೆದ 3 ತಿಂಗಳಿನಿಂದ ನಿಲ್ಲಿಸಿದ್ದಾರೆ. 75 ಹಾಸ್ಟೆಲ್‍ಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. 108 ವಸತಿ ಶಾಲೆಗಳಿಗೆ ಪ್ರತಿ ಶಾಲೆಗೆ 10 ಎಕರೆಯಷ್ಟು ಭೂಮಿಯನ್ನು ನಾವು ನೀಡಿದ್ದೆವು. ಅವುಗಳಿಗೆ ಹಣ ಮಂಜೂರು ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಚಿವ ಮಹದೇವಪ್ಪನವರು ಸುಮ್ಮನೆ ರಾಜಕೀಯಕ್ಕೆ ಬಂದವರಲ್ಲ. ಅವರಿಗೆ ದಲಿತ ಸಂಘರ್ಷ ಸಮಿತಿ ಹೋರಾಟದ ಹಿನ್ನೆಲೆ ಇದೆ. ಅವರು ಯಾವುದೇ ಕಾರಣಕ್ಕೂ ಅನುದಾನ ಹೊಂದಾಣಿಕೆಯನ್ನು ಒಪ್ಪಬಾರದು ಎಂದು ಆಗ್ರಹಿಸಿದರು. ಒಲ್ಲದ, ಭಾರವಾದ ಮನಸ್ಸಿನಿಂದ ಇದನ್ನು ಒಪ್ಪಿಕೊಂಡಿದ್ದಾಗಿ ಮಹದೇವಪ್ಪನವರು ಹೇಳಿದ್ದನ್ನು ಕೆಲವು ಪತ್ರಿಕೆಯವರು ಪ್ರಕಟಿಸಿದ್ದಾರೆ. ಮಹದೇವಪ್ಪನವರು ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಕ್ತಿಯಿಂದ ಇದಕ್ಕೆ ತಡೆ ಒಡ್ಡಬೇಕು ಎಂದು ಅವರು ಒತ್ತಾಯಿಸಿದರು.
ಎಸ್‍ಸಿ, ಎಸ್‍ಟಿ ಜನಾಂಗ ಕಡೆಗಣಿಸಿದರೆ ಹೋರಾಟ
ಬಡವರ ಮಕ್ಕಳಿಗೆ ಓದಲು ಅವಕಾಶ ಮಾಡಿಕೊಡಲು ಮೊಟ್ಟ ಮೊದಲು ಹಾಸ್ಟೆಲ್ ನಿರ್ಮಿಸಿಕೊಡಿ. ವಸತಿ ಶಾಲೆಗಳನ್ನು ಪೂರ್ಣಗೊಳಿಸಿ ಬಡವರ ಮಕ್ಕಳಿಗೆ ಅವಕಾಶ ಸಿಗುವಂತಾಗಲಿ. ಹಾಸ್ಟೆಲ್‍ನಲ್ಲಿ ಒಂದು ಕೊಠಡಿಯಲ್ಲಿ 20ರಿಂದ 30 ಹುಡುಗರನ್ನು ಕುರಿ ತುಂಬಿಸಿದಂತೆ ತುಂಬಿಸಿ ಓದಿಸಲು ಸಾಧ್ಯವಿಲ್ಲ. ಅವರಿಗೆ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲ. 11 ಸಾವಿರ ಕೋಟಿ ಪೈಕಿ 2,500 ಕೋಟಿಯನ್ನು ಹಾಸ್ಟೆಲ್ ಮತ್ತು ವಸತಿ ಶಾಲೆಗೆ ಕೊಡಬೇಕು ಎಂದು ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.
ಭೂಮಿ ಖರೀದಿಗೆ 2,500 ಕೋಟಿ, ಗಂಗಾಕಲ್ಯಾಣ ಯೋಜನೆಗೆ 1 ಸಾವಿರ ಕೋಟಿ ಕೊಡಬೇಕು ಎಂದು ಒತ್ತಾಯಿಸಿದರು. ಬಸ್ಸಿನಲ್ಲಿ ಪುಕ್ಕಟೆ ಪ್ರಯಾಣ, ಉಚಿತ ವಿದ್ಯುತ್ ನೀಡಿದ್ದಾಗಿ ಹೇಳಿಕೊಂಡು ಅದನ್ನೆಲ್ಲ ಎಸ್‍ಸಿ, ಎಸ್‍ಟಿ ಖಾತೆಗೆ ಹಾಕುವುದು ಮೋಸದಾಟ ಎಂದು ಟೀಕಿಸಿದ ಅವರು, ಇದನ್ನು ಮಾಡಿದ್ದೇ ಆದರೆ, ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರವು 5 ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆ, ಕಲ್ಯಾಣಕ್ಕೋಸ್ಕರ ಮೀಸಲಿಟ್ಟ ಹಣವನ್ನು ಒಂದೆಡೆ ನೀಡುತ್ತಿದೆ. ಅಷ್ಟೂ ಸಾಕಾಗದೆ ಬೆಲೆ ಏರಿಕೆಯ ಬರೆಯನ್ನೂ ಈ ಸರಕಾರ ಹಾಕುತ್ತಿದೆ ಎಂದು ಟೀಕಿಸಿದರು.
ಒಂದು ಕಡೆ ಕೊಟ್ಟು ಅನೇಕ ಕಡೆ ಕಿತ್ತುಕೊಳ್ಳುವ ಸರಕಾರ
ಬಡವರಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡು 5 ಗ್ಯಾರಂಟಿ ಯೋಜನೆಗಳಿಗಾಗಿ 25 ರೀತಿಯಲ್ಲಿ ಬೆಲೆ ಏರಿಕೆ ಮಾಡಿದೆ ಎಂದು ರವಿಕುಮಾರ್ ಅವರು ನುಡಿದರು. ಈ ಸರಕಾರ ಒಂದು ಕಡೆ ಕೊಡುತ್ತದೆ. ಅನೇಕ ಕಡೆ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.
ಬೆಲೆ ಏರಿಕೆಯಿಂದ ಸುಮಾರು 50 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಬೃಹತ್ ಯೋಜನೆಯನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ವಿವರಿಸಿದರು. ಇದು ಕೊಡುವ ಸರಕಾರ ಅಲ್ಲ; ಕಿತ್ತುಕೊಳ್ಳುವ ಸರಕಾರ ಎಂದು ಆಕ್ಷೇಪಿಸಿದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದಾಗ ಕಾಂಗ್ರೆಸ್ ಮುಖಂಡರು ಮೊಸಳೆಕಣ್ಣೀರು ಸುರಿಸಿ ಕೇಂದ್ರ ಸರಕಾರವನ್ನು ಬೈದರು. ಪುಂಖಾನುಪುಂಖವಾಗಿ ಕೇಂದ್ರ ಸರಕಾರವನ್ನು ಬೈದರು. ಕೇಂದ್ರದ್ದು ಕರ್ನಾಟಕ ರಾಜ್ಯ ವಿರೋಧಿ ಸರಕಾರ ಎಂದರು. ಈಗ ನಮ್ಮ ಕೇಂದ್ರ ಸರಕಾರವು ಅಮೆರಿಕ, ಬೇರೆ ದೇಶಗಳಿಗೆ ಅಕ್ಕಿ ರಫ್ತನ್ನು ನಿಲ್ಲಿಸಿದೆ. ವಿಪರೀತ ಮಳೆ, ಪ್ರವಾಹ, ಅನೇಕ ರಾಜ್ಯಗಳಲ್ಲಿ ಕಡಿಮೆ ಮಳೆ ಪರಿಣಾಮವಾಗಿ ಬೆಲೆ ಹೆಚ್ಚಳ ಆಗಬಹುದೆಂಬ ದೂರದೃಷ್ಟಿ ಇಟ್ಟುಕೊಂಡು 400 ಮಿಲಿಯನ್ ಟನ್ ಅಕ್ಕಿ ರಫ್ತನ್ನು ನಿಲ್ಲಿಸಿದೆ. ಇದರಿಂದ ದೇಶದ ಬಡವರು, ಹಿಂದುಳಿದ ವರ್ಗಗಳಿಗೆ, ದಲಿತ ವರ್ಗದವರಿಗೆ ಸಹಾಯ ಆಗಲಿದೆ ಎಂದು ವಿವರಿಸಿದರು. ಅಕ್ಕಿ ರಫ್ತು ನಿಲ್ಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯ ಬಿಜೆಪಿ ಅಭಿನಂದಿಸುತ್ತದೆ ಎಂದು ಹೇಳಿದರು.
ಯಾರು ದಲಿತರ ಪರ, ಯಾರು ಹಿಂದುಳಿದ ವರ್ಗಗಳ ಪರ ಎಂದು ಸಿದ್ದರಾಮಯ್ಯನವರು ಈಗ ಹೇಳಲಿ ಎಂದು ಸವಾಲೆಸೆದರು. ಯಾಕೆ ಸಿದ್ದರಾಮಯ್ಯನವರು ಮಾತನಾಡುತ್ತಿಲ್ಲ? ಸ್ವಾಗತ ಮಾಡುತ್ತಿಲ್ಲ ಎಂದು ಕೇಳಿದ ಅವರು, ನಿಮಗೆ ಬೈಯೋಕೆ ಮಾತ್ರ ಬರುವುದೇ? ಒಳ್ಳೆಯದಾಗಿದ್ದನ್ನು ಸ್ವಾಗತಿಸುವ ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗೆ ನಾವು ಪರ ಇದ್ದೇವೆ. ಆದರೆ, ಹಾಲಿನಿಂದ ಆಲ್ಕೋಹಾಲಿನ ವರೆಗೆ 25 ರೀತಿಯ ಬೆಲೆ ಏರಿಕೆಯಿಂದ ಎಲ್ಲರಿಗೂ ತೊಂದರೆ ಆಗಿದೆ. ಇದು ಎಲ್ಲರಿಗೂ ತೊಂದರೆ ಕೊಡುವ ಸರಕಾರ ಎಂದು ನುಡಿದರು. ಮಹದೇವಪ್ಪ ಅವರು ದಲಿತರ ಪರವೇ ದಲಿತ ವಿರೋಧಿಯೇ ಎಂದು ಮುಕ್ತವಾಗಿ ಹೇಳಿಕೆ ಕೊಡಬೇಕು ಎಂದು ಆಗ್ರಹಿಸಿದರು.
11 ಸಾವಿರ ಕೋಟಿ ಬೇರೆಡೆಗೆ ವರ್ಗಾಯಿಸಿ ದಲಿತರನ್ನು ವಂಚಿಸಿದ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸರಕಾರ 11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ನೀಡುವುದನ್ನು ವಿರೋಧಿಸಿ ಎಸ್‍ಸಿ ಮೋರ್ಚಾ, ಎಸ್‍ಟಿ ಮೋರ್ಚಾ ಸೇರಿದಂತೆ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಪ್ರಕಟಿಸಿದರು. ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.