ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಗೂ ಮುನ್ನ ಗ್ಯಾರಂಟಿ ಘೋಷಿಸುವ ವೇಳೆ ಯಾವುದೇ ಷರತ್ತುಗಳನ್ನು ಹೇಳಿರಲಿಲ್ಲ ಆದರೆ ಈಗ ಎಲ್ಲ ಗ್ಯಾರಂಟಿಗಳಿಗೂ ಕಂಡೀಷನ್ ಹಾಕುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಮನೆಗಳಿಗೂ ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಮೊತ್ತ ದುಪ್ಪಟ್ಟಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ಬಿಟ್ಟಿ ಯೋಜನೆಗಳಿಗೆ ಹಣ ಹೇಗೆ ಹೊಂದಿಸಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ?, ಎಷ್ಟು ಸಾಲವಿದೆ? ಇದೆಲ್ಲದರ ಬಗ್ಗೆಯೂ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು. ಕಾಂಗ್ರೆಸ್ ಬಹಳ ಧೈರ್ಯದಿಂದ ಗ್ಯಾರಂಟಿ ಘೋಷಣೆ ಮಾಡಿದೆ. ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಹೆಚ್ಚುವರಿ ತೆರಿಗೆ ವಿಧಿಸ್ತೀರಾ?, ಸಾಲ ಮಾಡುತ್ತೀರಾ ಮೊದಲು ತಿಳಿಸಿ ಎಂದರು.