ಹೊಸದಿಗಂತ ವರದಿ ಬೆಳಗಾವಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧ ತೆರವುಗೊಳಿಸಿರುವುದಕ್ಕೆ ಆಕ್ರೋಶ ಹೊರ ಹಾಕಿರುವ ಚಕ್ರವರ್ತಿ ಸೂಲಿಬೆಲೆ ಅವರು, ಕಾಂಗ್ರೆಸ್ ಈಗ ಮುಸ್ಲಿಂ ಪಾರ್ಟಿ ಯಾಗಿ ಪರಿವರ್ತನೆ ಆಗಿದೆ ಎಂದು ಹೇಳಿದ್ದಾರೆ.
ನಗರದ ಟಿಳಕವಾಡಿ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇದಕ್ಕಿಂತ ಭಿನ್ನವಾದ ನಿರೀಕ್ಷೆ ನಮಗಿರಲಿಲ್ಲ ಎಂದರು.
ಕಾಂಗ್ರೆಸ್ ನವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲ. ಸಿದ್ದರಾಮಯ್ಯನವರಿಗೆ ಕಾನೂನು ಹೇಳಿದನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿಯೂ ಇಲ್ಲ. ಹೇಗಾದರೂ ಮಾಡಿ ಮುಸ್ಲಿಂ ಮತ ಸೆಳೆಯುವ ತಂತ್ರವಾಗಿದೆ. ಹೀಗಾಗಿ, ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಆಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಸಮಾನತೆ ಇರಬೇಕೆಂದು ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಆದರೆ ಸಿದ್ದರಾಮಯ್ಯ ಈಗ ಹಿಜಾಬ್ ನಿಷೇಧ ತೆರವು ಮಾಡಿರುವುದು ದುರಂತದ ಸಂಗತಿ ಎಂದರು.
ಈ ಹಿಂದೆಯೂ ಕೂಡ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪಿಎಫ್ಐ ಬೆಂಬಲಿಗರಂತೆ ವರ್ತಿಸಿ, ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ಗಳನ್ನುವಾಪಸ್ ಪಡೆದುಕೊಂಡರು. ಈಗ ಹಿಜಾಬ್ ನಿಷೇಧ ತೆರವು ಮಾಡಿದ್ದಾರೆ ಅಷ್ಟೇ ಎಂದು ಸೂಲಿಬೆಲೆ ಅವರು ಟೀಕಿಸಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ತ್ರಿವಳಿ ತಲಾಕ್ ಹಿಂಪಡೆದರು. ಈಗ ಕಾಂಗ್ರೆಸ್ ಹಿಜಾಬ್ ಜಾರಿಗೊಳಿಸಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷೆ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಜಾಬ್ಗೆ ಅನುಮತಿ ನೀಡಿದರೆ ಕೇಸರಿ ಶಾಲು ಧಾರಣೆಗೆ ಅನುಮತಿ ಕೊಡಬೇಕೆಂಬ ಎಂಬ ಬೇಡಿಕೆ ಬರಬಹುದು. ಇದಕ್ಕಾಗಿ ಈ ಹಿಂದೆ ಗಲಾಟೆ ಆಗಿತ್ತು. ಈಗಲೂ ಕೂಡ ಗಲಾಟೆ ಆಗಲಿದೆ. ಇದು ಇನ್ನೊಂದು ವೈಮನಸ್ಸಕ್ಕೆ ಕಾರಣವಾಗಲಿದೆ. ಈ ವಿವಾದಕ್ಕೆ ಸಿಎಂ ಕಿಡಿ ಹಚ್ಚಿದಂತಾಗಿದೆ ಎಂದು ಹೇಳಿದರು.
ಈ ಹಿಂದೆ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಆದರೂ ಸಹ ಕಾಂಗ್ರೆಸ್ ಹಿಜಾಬ್ ನಿಷೇಧ ತೆರವು ಮಾಡುತ್ತಿರುವುದು ಮಾಡ್ತಿರುವುದು ದೊಡ್ಡ ದುರಂತ ಎಂದರು.
ಕಾಲೇಜು ಮಕ್ಕಳಲ್ಲಿ ಸಹಜವಾಗಿಯೇ ಈ ಸಂಬಂಧ ಗಲಾಟೆಗೆ ಕಾರಣವಾಗಲಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಲು ಆರಂಭಿಸಿದರೆ ಹಿಂದೂ ಹುಡುಗರೂ ಕೇಸರಿ ಹಾಕಿಕೊಳ್ಳುತ್ತಾರೆ. ಆಗ ಯಾರೂ ವಿರೋಧಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಕಡಿಮೆ ಅವಧಿಯಲ್ಲಿ ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದಾರೆ ಎಂದು ಸೂಲಿಬೆಲೆ ಅಭಿಪ್ರಾಯಪಟ್ಟರು.
ಮುಸ್ಲಿಂ ತುಷ್ಠಿಕರಣಕ್ಕಾಗಿ ಸಿದ್ದರಾಮಯ್ಯನವರು ಆ ಸಮುದಾಯಕ್ಕೆ 10 ಸಾವಿರ ಕೋಟಿ ನೀಡುವುದಾಗಿ ಸಿಎಂ ಹೇಳಿದ್ದಾರೆ. ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ. ಎಸ್ಸಿ, ಒಬಿಸಿ ಫಂಡ್ ನಿಂದ ತೆಗೆದುಕೊಡುತ್ತಾರೆಯೇ ಎಂದ ಪ್ರಶ್ನಿಸಿದ ಅವರು, ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಲಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ರಾಂಗ್ ಪಾಥ್ನಲ್ಲಿ ನಡೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಎಚ್ಚರಿಸಿದರು.