ಹೊಸದಿಗಂತ ಡಿಜಿಟಲ್ ಡೆಸ್ಕ್:
ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದರೆ ಕರ್ನಾಟಕದಲ್ಲಿ ಸರಕಾರ ರಚಿಸಲು ಹೆಚ್ಚಿನ ಅವಕಾಶವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ರಥಬೀದಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೆಳ್ತಂಗಡಿಯ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೪೧ ಸ್ಥಾನ ಲಭಿಸಲಿದ್ದು, ಕಾಂಗ್ರೆಸ್ ಸರಕಾರ ರಚಿಸುವುದು ಖಚಿತ. ಈಗಾಗಲೇ ಬಿಜೆಪಿ ಪಕ್ಷದ ಹಲವಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇನ್ನಷ್ಟು ಮುಖಂಡರು ನಮ್ಮ ಪಕ್ಷಕ್ಕೆ ಸೇರಲು ಬಯಕೆ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು.
ಸಾಮಾಜಿಕ ನ್ಯಾಯದಡಿಯಲ್ಲಿ ಸಮರ್ಥ ನಾಯಕರಿದ್ದರೂ ಪಕ್ಷದ ತೀರ್ಮಾನದಂತೆ ಯುವ ಸಮುದಾಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿ ಈ ಬಾರಿ ೪ ಹೊಸ ಮುಖಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಪ್ರಣಾಳಿಕೆಯಲ್ಲಿರುವ ಯಾವುದೇ ಕೆಲಸಗಳು ಪ್ರಗತಿ ಸಾಧಿಸದೆ ನಿರುದ್ಯೋಗ ಸಮಸ್ಯೆ ಉಂಟಾಗಿ ಆದಾಯ ಪಾತಾಳಕ್ಕೆ ಕುಸಿದು ಬೆಲೆ ಏರಿಕೆ ಗಗನವನ್ನು ತಲುಪಿದೆ. ಕಾಂಗ್ರೆಸ್ ಸರಕಾರ ಬಂದಲ್ಲಿ ಕರಾವಳಿ-ಮಲೆನಾಡು ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಉದ್ಯೋಗ ಸೃಷ್ಟಿಯ ವ್ಯವಸ್ಥೆ ಕೈಗೊಳ್ಳಲಾಗುವುದು. ರಾಜ್ಯದ ರೈತರಿಗೆ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುವುದು” ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಮೇ ೧೦ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಭವಿಷ್ಯದ ಬದಲಾವಣೆಯೊಂದಿಗೆ ಭ್ರಷ್ಟಾಚಾರವನ್ನು ಬಡಿದೋಡಿಸುವ ದಿನವಾಗಲಿ. ನಮ್ಮ ಸರಕಾರ ಬಂದಲ್ಲಿ ಅರಣ್ಯ ಭೂಮಿ ಒತ್ತುವರಿ,ಕುಮ್ಕಿ ಮೊದಲಾದ ಜಮೀನುಗಳ ಸಕ್ರಮಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಲಾಗುವುದು. ಧರ್ಮ ಯಾವುದಾದರೂ ತತ್ವ ಒಂದೇ ಆಗಿದ್ದು ಜಾತಿ ಧರ್ಮದ ವ್ಯವಸ್ಥೆಯಲ್ಲಿ ಮಾನವೀಯ ನೆಲೆಯಲ್ಲಿ ಬದುಕುವುದು ಮುಖ್ಯ” ಎಂದು ಡಿ.ಕೆ. ಶಿವಕುಮಾರ ಅಭಿಪ್ರಾಯಪಟ್ಟರು.