ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಗುವನ್ನು ಜಿಗುಟಿ ಅಳಿಸಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ನನಗಿರೋ ಮಾಹಿತಿ ಪ್ರಕಾರ ಕಾಂತರಾಜು ವರದಿಯಲ್ಲಿ ಒಂದೂವರೆ ಕೋಟಿ ಜನರ ವಿವರ ದಾಖಲಾಗಿಲ್ಲ. ಅದು ಐದು- ಹತ್ತು ಲಕ್ಷ ಜನರದ್ದಲ್ಲ. ಈ ವರದಿ ಅದೆಷ್ಟು ವೈಜ್ಞಾನಿಕವಾಗಿದೆ ಎಂದು ಪ್ರಶ್ನಿಸಿದರು.
ಇವರಿಗೆ ಬದ್ಧತೆ ಇದ್ದರೆ ಹಿಂದಿನ ಅಧಿಕಾರಾವಧಿಯಲ್ಲೇ ವರದಿ ಬಿಡುಗಡೆ ಮಾಡಬೇಕಿತ್ತು. ಉಪ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರೂ ಹೌದು. ಮುಖ್ಯಮಂತ್ರಿ ವರದಿ ಪರ ಇದ್ದು, ಡಿಸಿಎಂ ವರದಿಗೆ ಸಹಮತ ಇಲ್ಲ ಎಂದರೆ, ಸಿಎಂ ತೀರ್ಮಾನ ಇಷ್ಟವಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಆಶಿಸಿದರು.
ಈಗಾಗಲೇ ವೀರಶೈವ ಸಮಾಜ, ಒಕ್ಕಲಿಗ ಸಮಾಜದವರು ವರದಿ ವೈಜ್ಞಾನಿಕವಾಗಿಲ್ಲ ಎಂದು ತಿಳಿಸಿವೆ. ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆಯೇ ಹೊರತು ರಾಜ್ಯ ಸರಕಾರಕ್ಕೆ ಇಲ್ಲ. ಸಮೀಕ್ಷೆ ಹೆಸರಿನಲ್ಲಿ ಹಣ ಖರ್ಚಾಗಿದೆ. 1.5 ಕೋಟಿ ಜನರ ಮಾಹಿತಿ ಇದರಲ್ಲಿ ಇಲ್ಲ ಎಂದು ತಿಳಿಸಿದರು.
ಆರ್ಥಿಕ- ಸಾಮಾಜಿಕ- ಶೈಕ್ಷಣಿಕ- ರಾಜಕೀಯ ಸಂಬಂಧ ಜಾತಿ ಸಮೀಕ್ಷೆ ಆಗಬೇಕು. ಇರುವ ತಾಂತ್ರಿಕತೆಯನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ಸಮೀಕ್ಷೆ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಚಿವರು, ಡಿಸಿಎಂಗೆ ಸಹಮತ ಇಲ್ಲದೆ ಇದ್ದಾಗ ಜನಸಾಮಾನ್ಯರಿಗೆ ಅದರ ಕುರಿತು ತಿಳಿಸಿ ಮನವರಿಕೆ ಹೇಗೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ಮತ್ತು ವಿಷಯಾಂತರ ಮಾಡಲು ಇದನ್ನು ಬಳಸಿಕೊಳ್ಳದಿರಿ. ರಾಜಕೀಯ ಲಾಭಕ್ಕಾಗಿ ಕಾಂತರಾಜು ವರದಿ ಬಳಸಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದರು. ಈ ಮೂಲಕ ತುಳಿತಕ್ಕೆ ಒಳಗಾದ ಜನರು ರಾಜಕೀಯದ ಫುಟ್‍ಬಾಲ್ ಆಗಬಾರದು. ಇಲ್ಲಿಂದ ಅಲ್ಲಿಗೆ ಒದಿಯೋದು ಎಂಬಂತೆ ಪಾಲಿಟಿಕಲ್ ಫುಟ್‍ಬಾಲ್ ಆಗಬಾರದು ಎಂದು ತಿಳಿಸಿದರು.
ಈ ವರದಿ ರಿಸರ್ವ್ ಬ್ಯಾಂಕ್ ಗವರ್ನರ್ ಸಹಿ ಇಲ್ಲದ ನೋಟಿನಂತಾಗಿದೆ. ಅದು 500 ರೂ. ನೋಟಾದರೇನು? 2 ಸಾವಿರದ ನೋಟಾದರೇನು? ಅದು ರದ್ದಿ ಪೇಪರ್ ಆಗಿರುತ್ತದೆ. ರಿಸರ್ವ್ ಬ್ಯಾಂಕ್ ಗವರ್ನರ್ ಸಹಿ ಇದ್ದಾಗ ಮಾತ್ರ ಅದಕ್ಕೆ ಮೌಲ್ಯ ಇದೆ. ಹಾಗೇ ಆಗಿದೆ ಎಂದು ವಿಶ್ಲೇಷಿಸಿದರು.
ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಸಿಗಬೇಕೆಂಬ ಆಶಯ ನಮ್ಮ ಪಕ್ಷದ್ದು. ಗೆದ್ದು ಬರಲಾಗದ, ಅವಕಾಶವಂಚಿತ ಸಣ್ಣ ಸಣ್ಣ ಸಮುದಾಯಗಳಿಗೆ ನಾಮಕರಣ ಮಾಡುವ ಹುದ್ದೆಗಳಿಗೆ ಶೇ 50 ಮೀಸಲಿಡಬೇಕೆಂಬ ವೈಯಕ್ತಿಕ ಅಭಿಪ್ರಾಯ ನನ್ನದು. ಈ ವಿಷಯವನ್ನು ಪಕ್ಷದ ವೇದಿಕೆಯಲ್ಲೂ ಚರ್ಚಿಸುವೆ ಎಂದು ತಿಳಿಸಿದರು. ಸಣ್ಣ ಜಾತಿಗಳಿಗೆ ಧ್ವನಿ ಕೊಡಲು ಇದು ಅನಿವಾರ್ಯ. ನಮ್ಮ ಪಕ್ಷದ ವೇದಿಕೆಯಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ. ನನ್ನ ಕ್ಷೇತ್ರದಲ್ಲಿ ಅದನ್ನು ಮಾಡಿದ್ದೇನೆ ಎಂದು ತಿಳಿಸಿದರು.