ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಂ ರಮೇಶ್ ಅವರು ಬುಧವಾರ ಮೇಲ್ಮನೆಯಲ್ಲಿ ಮಸೂದೆಗೆ ಉತ್ತರ ನೀಡುವ ಸಂದರ್ಭದಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಸಭಾಪತಿ ಜಗದೀಪ್ ಧಂಖರ್ ಗೆ ನೋಟಿಸ್ ಸಲ್ಲಿಸಿರುವ ರಮೇಶ್, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಾಕಾರಿ ಮಾತುಗಳನ್ನಾಡಿರುವ ಅಮಿತ್ ಶಾ ವಿರುದ್ಧ ನಿಯಮ188ರ ಅಡಿಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ 25 ರಂದು ವಿಪತ್ತು ನಿರ್ವಹಣಾ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಆಡಳಿತದಲ್ಲಿ ಪಿಎಂ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿತ್ತು. ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಪಿಎಂ ಕೇರ್ಸ್ ಸ್ಥಾಪಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಕೇವಲ ಒಂದು ಕುಟುಂಬದ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ ಅಧ್ಯಕ್ಷರು ಅದರ ಸದಸ್ಯರಾಗಿದ್ದರು. ಕಾಂಗ್ರೆಸ್ ಅಧ್ಯಕ್ಷರು ಸರ್ಕಾರದ ನಿಧಿಯ ಭಾಗವಾಗಿದ್ದರು. ಅವರು ಸರ್ಕಾರಕ್ಕೆ ಎನು ಉತ್ತರಿಸುತ್ತಾರೆ ಎಂದು ಶಾ ಹೇಳಿದ್ದರು.
ಹೀಗಾಗಿ ಗೃಹ ಸಚಿವರು ಸೋನಿಯಾ ಗಾಂಧಿಯವರ ಹೆಸರನ್ನು ತೆಗೆದುಕೊಳ್ಳದಿದ್ದರೂ ರಾಷ್ಟ್ರೀಯ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ (ಎನ್‌ಪಿಎಂಆರ್‌ಎಫ್) ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಸೋನಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಸದನದ ಯಾವುದೇ ಸದಸ್ಯರನ್ನು ಪ್ರತಿಬಿಂಬಿಸುವುದು ಅಥವಾ ಅವಹೇಳನಕಾರಿ ಮಾತುಗಳನ್ನಾಡುವುದು ಹಕ್ಕುಚ್ಯುತಿಯಾಗಲಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.