ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಹಿಂದೆ ಅಧಿಕಾರದಲ್ಲಿದ್ದಾಗ ಶೇ.40ರಷ್ಟು ಕಮಿಷನ್ ಪಡೆದಿದ್ದ ಹಣದಿಂದ ಈಗ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಆದರೆ ಅವರಿಂದ ಕಾಂಗ್ರೆಸ್ ಅನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಉಲ್ಲಂಘಿಸುವಲ್ಲಿ ಬಿಜೆಪಿ ಯಾವಾಗಲು ಮುಂದೆ ಇರುತ್ತದೆ. ಈಗ ಅಧಿಕಾರದಲ್ಲಿ ಇರುವ ಸರ್ಕಾರ ಪತನಗೊಳಿಸಲು ಹೊಂಚು ನಡೆಸಿದೆ ಎಂದರು.
ಕಾಂಗ್ರೆಸ್ ಸಂವಿಧಾನದ ಆಶಯ, ಸಿದ್ಧಾಂತಗಳಿಂದ ದೇಶವನ್ನು ಒಗ್ಗೂಡಿಸುತ್ತಿದೆ. ಆದರೆ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ವಧರ್ಮ ಸಮನ್ವಯ, ಸರ್ವ ಜನರ ವಿಕಾಸ ಹಾಗೂ ಕಾಂಗ್ರೆಸ್ ವಿಚಾರಧಾರೆಯನ್ನು ಮೆಚ್ಚಿ ಕರ್ನಾಟಕದ ಜನತೆ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು.
ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡುವುದು ಸಂವಿಧಾನ ವಿರೋಧಿ. ನೇಪಾಳದಲ್ಲಿ ಶೇ. 95 ರಷ್ಟು ಜನ ಹಿಂದುಗಳಿದ್ದರೂ ಅಲ್ಲಿ ಹಿಂದು ರಾಷ್ಟ್ರವೆಂದು ಘೋಷಣೆ ಮಾಡಿಲ್ಲ. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್ ಎಲ್ಲ ಧರ್ಮೀಯರು ಭಾಗವಹಿಸಿದ್ದರು ಎಂದು ಹೇಳಿದರು.
ಮಣಿಪುರದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿ ಮಾಡಲಾಗಿದ್ದು, ಇದು ಅತ್ಯಂತ ದುರದೃಷ್ಟ ಸಂಗತಿ. ಅಲ್ಲಿಯ ಸಿಎಂ ಬೇಜವಾಬ್ದಾರಿಯಿಂದ ಹಿಂಸಾಚಾರ ನಡೆದಿದೆ. ಸದ್ಯ ಮಣಿಪುರ ಬಿಟ್ಟಿರುವ ಹಿಂದತ್ವವಾದಿಗಳು ಕಾಶ್ಮೀರದಲ್ಲಿ ಪ್ರಯೋಗ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.