ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾಜಿ ಕೇಂದ್ರ ಸಚಿವ , ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಭಾಗವಹಿಸಿ ಗಮನ ಸೆಳೆದಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಇಂದು ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಈ ಇಫ್ತಾರ್ ಕೂಟಕ್ಕೆ ಭಾರತದ ಕೆಲವು ಗಣ್ಯರಿಗೂ ಆಹ್ವಾನ ನೀಡಲಾಗಿತ್ತು. ಆಹ್ವಾನಿತರಲ್ಲಿ ಒಬ್ಬರಾದ ಮಣಿಶಂಕರ್ ಅಯ್ಯರ್, ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
ಪಾಕಿಸ್ತಾನ ರಾಯಭಾರ ಕಚೇರಿಗೆ ಆಗಮಿಸಿದ ಮಣಿಶಂಕರ್ ಅಯ್ಯರ್ ಅವರನ್ನು, ಪಾಕಿಸ್ತಾನದ ರಾಯಭಾರಿ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ರಂಜಾನ್ ತಿಂಗಳಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಇಫ್ತಾರ್ ಕೂಟದ ಆಯೋಜನೆ ಸಾಮಾನ್ಯ ಸಂಗತಿ. ಅದೇ ರೀತಿ ಈ ಇಫ್ತಾರ್ ಕೂಟಕ್ಕೆ ಭಾರತೀಯ ಮತ್ತು ವಿದೇಶಿ ಗಣ್ಯರನ್ನೂ ಆಹ್ವಾನಿಸಲಾಗುತ್ತದೆ. ಕಳೆದ ವರ್ಷವೂ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಇಫ್ತಾರ್ ಕೂಟವನ್ನು ಆಯೋಜಿಸಿದಂತೆ, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಆಚರಿಸುತ್ತದೆ. ಈ ವೇಳೆ ಕೆಲವು ಪಾಕಿಸ್ತಾನಿ ಗಣ್ಯರನ್ನು ಭೋಜನಕ್ಕೆ ಆಹ್ವಾನಿಸಲಾಗಿರುತ್ತದೆ.
ಮಣಿಶಂಕರ್ ಅಯ್ಯರ್ ಅವರು ಈ ಹಿಂದೆ ಬಾರಿ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿದ್ದರು. 2024ರಲ್ಲಿ ಭಾರತವು ಪಾಕಿಸ್ತಾನವನ್ನು ಗೌರವಿಸುವುದನ್ನು ಕಲಿಯಬೇಕು, ಇಲ್ಲದಿದ್ದರೆ ಪಾಕಿಸ್ತಾನ ನಮ್ಮ ಮೇಲೆ ಪರಮಾಣು ಬಾಂಬ್ ಹಾಕುತ್ತದೆ” ಎಂಬ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು.