ಸಿಲಿಕಾನ್ ಸಿಟಿಗೆ ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ: 6 ಸಾವಿರ ಪೊಲೀಸರ ನಿಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ನಾಳೆ ( ಆಗಸ್ಟ್ 8) ರಾಹುಲ್ ಗಾಂಧಿ ಆಗಮನ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿ ರಾಹುಲ್ ಗಾಂಧಿ ರ್ಯಾಲಿ ನಡೆಸುತ್ತಿದ್ದಾರೆ.

ಈ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದ ಕ್ಯಾಬಿನೆಟ್ ಸಚಿವರೆಲ್ಲಾ ಭಾಗವಹಿಸುತ್ತಿದ್ದಾರೆ.

ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಕಾಂಗ್ರೆಸ್ ಪಕ್ಷದ ರ್ಯಾಲಿ ನಡೆಯಲಿದೆ. ಬೆಂಗಳೂರು ಪೊಲೀಸರು, ಫ್ರೀಡಂ ಪಾರ್ಕ್ ಸುತ್ತಮುತ್ತಲ ಪ್ರದೇಶವನ್ನು ಭದ್ರತೆಯ ಉದ್ದೇಶದಿಂದ 15 ಸೆಕ್ಟರ್ ಗಳಾಗಿ ವಿಂಗಡಣೆ ಮಾಡಿಕೊಂಡಿದ್ದಾರೆ. ಪ್ರತಿ ಸೆಕ್ಟರ್ ಗೆ ಓರ್ವ ಡಿಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗುತ್ತಿದೆ.

ನಾಳೆ ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ಬೆಂಗಳೂರು ಪೊಲೀಸರು ತಾತ್ಕಾಲಿಕ ಕಂಟ್ರೋಲ್ ರೂಂ ತೆಗೆದು ಭದ್ರತಾ ಕಾರ್ಯ ನಿರ್ವಹಿಸುವರು. 6000 ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಪ್ರತಿಭಟನಾನಿರತರ ನಡುವೆ 500 ಪೋಲಿಸರ ನಿಯೋಜನೆ ಮಾಡಲಾಗುತ್ತಿದೆ.

ಮಹಾರಾಣಿ ಕಾಲೇಜು ಜಂಕ್ಷನ್, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಉಪ್ಪಾರಪೇಟೆ, ಕಾಟನ್ ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಡಿಸಿಪಿಗಳ ನೇತೃತ್ವದಲ್ಲಿ 15 ಸೆಕ್ಟರ್ ಗಳಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಗರುಡ ಪೋರ್ಸ್ ಮತ್ತು ಡಿ ಸ್ವಾತ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಅಂಬ್ಯುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಕ್ವಿಕ್ ರೆಸ್ಪಾನ್ಸ್ ವೆಹಿಕಲ್, ಅಗ್ನಿಶಾಮಕ ದಳ ವಾಹನಗಳು ಸ್ಥಳದಲ್ಲಿ ಇರಲಿವೆ. 5 ವಾಯುವಜ್ರ ಬಸ್ ಸೇರಿದಂತೆ ಒಟ್ಟು 15 ಬಸ್ ಗಳನ್ನು ತುರ್ತು ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ. ಜನರ ಆರೋಗ್ಯ ಕಾಪಾಡಲು ತುರ್ತು ಉದ್ದೇಶಗಳಿಗಾಗಿ ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.

ಪ್ರತಿಭಟನಾ ಮೆರವಣಿಗೆ ಸಾಗುವ ಮಹಾರಾಣಿ ಜಂಕ್ಷನ್, ಮುಖ್ಯ ಚುನಾವಣಾಯುಕ್ತರ ಕಚೇರಿ , ಕಾವೇರಿ ಗೆಸ್ಟ್ ಹೌಸ್, ಬಿಎಂಸಿ ಹಾಸ್ಟೇಲ್ ಬಳಿ, ಓಣಿ ಆಂಜನೇಯ ದೇವಾಲಯ, ಜ್ಞಾನ ಜ್ಯೋತಿ ಆಡಿಟೋರಿಯಂ, ಪ್ಯಾಲೇಸ್ ರಸ್ತೆ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕುರುಬರ ಸಂಘ ಸರ್ಕಲ್, ಸಾಗರ್ ಜಂಕ್ಷನ್, ಗಾಂಧೀ ನಗರ, ಪೋತಿಸ್ ಜಂಕ್ಷನ್ ಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!