ಹೊಸದಿಗಂತ ವರದಿ ಹುಬ್ಬಳ್ಳಿ :
ಕಾಂಗ್ರೆಸ್ನವರು ಪರಮ ಭ್ರಷ್ಟರಾಗಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ವಿಚಿತ್ರ ಸಂಗತಿ. ಭ್ರಷ್ಟಾಚಾರದ ಬೀಜ ಬಿತ್ತಿ, ತತ್ತಿಯನ್ನಿಟ್ಟು ಕಾವನ್ನು ಕೊಟ್ಟವರು ಕಾಂಗ್ರೆಸ್ ಮುಖಂಡರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದರು.
ಮತದಾರರಿಗೆ ಹಣದ ಆಮಿಷ ತೋರಿಸುತ್ತಿರುವ ಬಿಜೆಪಿಯನ್ನು ಬ್ಯಾನ್ ಮಾಡಿ ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಿಂದಲೇ ಭ್ರಷ್ಟಾಚಾರ ಆರಂಭವಾಗಿದ್ದು ಎಂದು ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ನೆಹರು ಕಾಲದ ಜೀಪ್ ಹಗರಣದಿಂದ ಆರಂಭವಾದ ಭ್ರಷ್ಟಾಚಾರ ಮನಮೋಹನ ಸಿಂಗ್ವರೆಗೂ ನಡೆದಿದೆ. ಆ ಸಂದರ್ಭದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿತ್ತು. ಸೋನಿಯಾ ಗಾಂಧಿ ಸಹ ಭಾಗಿಯಾಗಿದ್ದರು ಎಂದರು.
ಬಿಜೆಪಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದನ್ನು ಜನರು ಮೆಚ್ಚಿದ್ದರಿಂದ, ಇದನ್ನು ಸಹಿಸದ ಕಾಂಗ್ರೆಸ್ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಡ್ರಾಮಾ ಬಾಜಿ ಕಂಪನಿ ಅದಾಗಿದ್ದು, ಅವರನ್ನು ಜನ ಈಗಾಗಲೇ ಬ್ಯಾನ್ ಮಾಡಿದ್ದಾರೆ ಎಂದರು.