ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಸಭಾಧ್ಯಕ್ಷರ ಪೀಠದ ಬಳಿ ಕಾಂಗ್ರೆಸ್‌ನ ಕೆಲವು ನಾಯಕರು ಫೋಟೋ ಶೂಟ್ ನಡೆಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವರ್ತನೆ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿದೆ. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪೀಠದಲ್ಲಿದ್ದಾಗಲೇ, ಮಂಗಳೂರು ಕಾಂಗ್ರೆಸ್‌ನ ನಾಯಕರು ಅಲ್ಲಿ ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಫೋಟೋಗಳನ್ನು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಜ್ಯ ಘಟಕ, ಈ ಕುರಿತು ತೀವ್ರವಾಗಿ ಕಿಡಿಕಾರಿದೆ. ಸ್ಪೀಕರ್ ಹುದ್ದೆ ಅತ್ಯಂತ ಪವಿತ್ರ ಹಾಗೂ ಘನತೆ ಇರುವಂತಹದ್ದು. ಸ್ಪೀಕರ್ ಹುದ್ದೆ ಅಲಂಕರಿಸಿದವರು ರಾಜಕೀಯದಿಂದ ಗಾವುದ ದೂರದಲ್ಲಿರಬೇಕು ಎಂಬುದು ಅಲಿಖಿತ ನಿಯಮ. ಆದರೆ ಸ್ಪೀಕರ್ ಹುದ್ದೆ ಅಲಂಕರಿಸಿರುವ ಯು.ಟಿ. ಖಾದರ್ ಅವರು ಸದನದ ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿ ತಮ್ಮ ಪೀಠದ ಬಳಿ ತಮ್ಮ ರಾಜಕೀಯ ಆಪ್ತೇಷ್ಟರ ಜೊತೆ ಫೋಟೋಶೂಟ್ ಮಾಡಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ತಿಳಿಸಬೇಕು ಎಂದು ಬಿಜೆಪಿ ಪ್ರಶ್ನಿಸಿದೆ.