ಹೊಸದಿಗಂತ ವರದಿ, ಹಾವೇರಿ:
ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ವಿಷಕಾರಿಯಾಗಿದೆ, ಕೃಷಿಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಇದನ್ನು ಖಂಡಿಸಿ ಡಿ.೪ರಂದು ಸುವರ್ಣ ವಿಧಾನಸೌಧಕ್ಕೆ ರೈತರು ಮುತ್ತಿಗೆ ಹಾಕಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೨ ತಿಂಗಳೇ ಗತಿಸಿದರೂ ಕೃಷಿಕರಿಗೆ ಇಂಥ ಕಾರ್ಯಕ್ರಮ ಮಾಡಿದ್ದೇವೆ ಎಂದು ತೋರಿಸಿಕೊಡಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ ಅವರು, ಕೃಷಿ ಪಂಪ್ ಸೆಟ್ ವಿಚಾರದಲ್ಲಿ ಹೊಸ ಆದೇಶ ನೀಡಿ ಕೃಷಿಕರ ನೆಮ್ಮದಿ ಕದಡಿದ್ದಾರೆ. ಹಾಲು ಉತ್ಪಾದಕರಿಗೆ ರೂ.೭ ನೀಡುತ್ತೇವೆಂದು ಘೋಷಣೆ ಮಾಡಿದ್ದಾರೆ. ಇನ್ನು ಪ್ರಣಾಳಿಕೆಯಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆಂದು ಹೇಳಿದರು.
ಸಚಿವ ಶಿವಾನಂದ ಪಾಟೀಲ ಮೂಲಕ ಬಿಲ್ ವಾಪಸಾತಿ ಡ್ರಾಮಾ ಮಾಡುತ್ತಿದ್ದಾರೆ. ಒಟ್ಟಾರೆ ರೈತರನ್ನು ನಂಬಿಸಿ ಕತ್ತು ಕೊಯ್ಯುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ಬೃಹತ್ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಪ್ರಸ್ತುತ ಕೈ ಸರ್ಕಾರಕ್ಕೆ ಬರಗಾಲದ ಕಡೆ ಗಮನವೇ ಇಲ್ಲ. ರಾಜ್ಯದ ವಿವಿದ ಇಲಾಖೆಗಳಲ್ಲಿ ಇದ್ದ ಹಣವನ್ನು ತೆಗೆದುಕೊಂಡು ಹೋಗಿ ತೆಲಂಗಾಣದ ಬೀದಿಯಲ್ಲಿ ಹರಿದಾಡುವಂತೆ ಮಾಡಿದ್ದಾರೆ. ಇಂಥ ಸಿದ್ಧರಾಮಯ್ಯ, ಜನರ, ಕೃಷಿಕರ ಕಷ್ಟಕ್ಕೆ ಆಗದ ಸಿಎಂ ಸಿದ್ಧರಾಮಯ್ಯ ರಾಜ್ಯದ ಆಡಳಿತ ನಡೆಸಲು ಸಮರ್ಥರೇ ಎಂದು ಕುಟುಕಿದರು.