ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ವಿಭಜಕ ಮತ್ತು ಋಣಾತ್ಮಕ ರಾಜಕೀಯವನ್ನು ಮಾಡುತ್ತಿದೆ. ಇದನ್ನು ಹರಿಯಾಣದ ದೇಶಭಕ್ತರಾದ ಜನರು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನೆಲೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕುಟುಂಬ ರಾಜಕಾರಣವನ್ನು ಉತ್ತೇಜಿಸುವ ಕಾಂಗ್ರೆಸ್, ಎಂದಿಗೂ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
2004-14ರಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರೊಂದಿಗೆ ಪಕ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಒಳಗೊಂಡ ವಿವಾದಾತ್ಮಕ ಭೂ ವ್ಯವಹಾರಗಳ ಬಗ್ಗೆ ಮಾತನಾಡಿರುವ ಮೋದಿ ‘ಕಾಂಗ್ರೆಸ್ ಎಂದರೆ ಫಿಕ್ಸರ್ ಮತ್ತು ಅಳಿಯನ ಸಿಂಡಿಕೇಟ್’ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಗರಣಗಳು ಮತ್ತು ಗಲಭೆಗಳಿಂದ ನಲುಗಿದ್ದ ಹರಿಯಾಣವನ್ನು ಬಿಜೆಪಿ ಹೊರತಂದಿದೆ. ದಲಿತರು, ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ದ್ವಂದ್ವ ನಿಲುವುವನ್ನು ಹೊಂದಿರುವ ಕಾಂಗ್ರೆಸ್, ಅವರ ಹಿತಾಸಕ್ತಿಗಳನ್ನು ಕಡೆಗಣಿಸಿ, ಮೀಸಲಾತಿ ರದ್ದುಗೊಳಿಸುವುದರ ಬಗ್ಗೆ ಮಾತನಾಡಿದೆ ಎಂದು ಕಿಡಿಕಾರಿದ್ದಾರೆ.
ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ವೈಫಲ್ಯ ಕಂಡಿದೆ. ಸರ್ಕಾರದ ನೀತಿಗಳಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಡೀ ದೇಶವೇ ಭಾರತದತ್ತ ನೋಡುತ್ತಿದೆ. ಇಂತಹ ಸಮಯದಲ್ಲಿ ದೇಶವನ್ನು ಮತ್ತಷ್ಟು ಬಲಪಡಿಸುವ ಸರ್ಕಾರ ಆಯ್ಕೆ ಮಾಡುವುದು ಅಗತ್ಯವೆಂದು ಮೋದಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ ತನ್ನ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ರೈತರು, ಮಹಿಳೆಯರು ಮತ್ತು ಮಕ್ಕಳು, ಕಾರ್ಮಿಕರು, ಯುವಕರ, ರೈತರ ಸೇರಿದಂತೆ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸಿದೆ ಎಂದು ಮೋದಿ ತಿಳಿಸಿದ್ದಾರೆ.
ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ಕ್ಕೆ ಫಲಿತಾಂಶ ಹೊರಬೀಳಲಿದೆ.