ಹೊಸ ದಿಗಂತ ವರದಿ, ವಿಜಯಪುರ:
ಕಾಲೇಜು ದಿನಗಳಿಂದಲೂ ಕಾಂಗ್ರೆಸ್ ವಿರೋಧಿ ಆಗಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಗೋರಿಯಲ್ಲಿ ಕಾಲಿಡಲು ಹೊರಟ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಾ ? ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯದಿಂದ ನಾನು ಆ ಪಕ್ಷಕ್ಕೆ ಮೊದಲಿನಿಂದಲೂ ವಿರೋಧ ಮಾಡುತ್ತಿದ್ದೇನೆ ಎಂದರು.
ಹಿಂದೆ ನಮ್ಮ ದಲಿತ ಸಮುದಾಯದಲ್ಲಿ ವಿದ್ಯಾವಂತರು ಇರಲಿಲ್ಲ. ಈಗ ಎಲ್ಲರೂ ವಿದ್ಯಾವಂತರಿದ್ದಾರೆ. ತಿಳಿದುಕೊಂಡಿರುವವರು ಇದ್ದಾರೆ. ಈಗ ನಮ್ಮ ಜನರಿಗೆ ಹೋಗಿ ಕೇಳರಿ, ಕಾಂಗ್ರೆಸ್ನಿಂದ ಆದಂತಹ ಅನ್ಯಾಯದ ಕುರಿತು ನಮ್ಮ ಜನರೇ ಹೇಳುತ್ತಾರೆ ಎಂದರು.
ಹಿಂದೆ ನಾನೇ ಚುನಾವಣೆಗೆ ನಿಂತಾಗ ನಮ್ಮ ಅಜ್ಜಿ ನನಗೆ ಮತ ಹಾಕಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹಾಕಿದ್ದರು. ಆದರೆ ಈಗ ದಲಿತ ಸಮುದಾಯದವರು ಪ್ರಜ್ಞಾವಂತರಾಗಿದ್ದಾರೆ ಎಂದರು.
ಹೈಕಮಾಂಡ್ ಘೋಷಿಸಿದರೆ ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸುವೆ
ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಹೈಕಮಾಂಡ್ ಘೋಷಿಸಿದರೆ ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸುವೆ, ಇಲ್ಲ ಸಂಸದನಾಗಿ ಸ್ಪರ್ಧಿಸು ಅಂದರೆ ಸ್ಪರ್ಧಿಸುವ, ಇಲ್ಲ ಮನೆಯಲ್ಲಿ ಕೂಡು ಅಂದರೆ ಕೂಡುವೆ ಎಂದರು.
ದಲಿತ ಸಿಎಂ ಆಗುವುದಿದ್ದರೆ ಈ ಜಗತ್ತಿನಲ್ಲಿ ಯಾರಿಂದಲೂ ತಪ್ಪಿಸಲು ಆಗಲ್ಲ. ಯಾವನಾದರೂ ಒಬ್ಬ ಗಂಡು ಮಗ ಯಾರ ತಲೆ ಮೇಲಾದರೂ ಏರಿ ಸಿಎಂ ಆಗುತ್ತಾನೆ ಎಂದರು.