ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಬುಧವಾರ ನೋಟಿಸ್ ಸಲ್ಲಿಸಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅನುಮೋದನೆ ಕೊಟ್ಟಿದ್ದು, ಚರ್ಚೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ನೋಟಿಸ್ ನೀಡಿದರೆ, ಭಾರತ್ ರಾಷ್ಟ್ರ ಸಮಿತಿಯಿಂದ (ಬಿಆರ್ಎಸ್) ಮಹಡಿ ನಾಯಕ ನಾಗೇಶ್ವರ್ ರಾವ್ ಅವಿಶ್ವಾಸ ನಿರ್ಣಯಕ್ಕೆ ಪ್ರತ್ಯೇಕ ನೋಟಿಸ್ ಅನ್ನು ಸ್ಪೀಕರ್ಗೆ ಸಲ್ಲಿಸಿದರು.
ಅವಿಶ್ವಾಸ ನಿರ್ಣಯ ಸರ್ಕಾರದ ಬಹುಮತವನ್ನು ಪ್ರಶ್ನಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡುತ್ತದೆ. ನಿರ್ಣಯ ಅಂಗೀಕಾರವಾದರೆ ಸರ್ಕಾರ ಕೆಳಗಿಳಿಯಬೇಕಾಗುತ್ತದೆ. ಮಣಿಪುರದ ಹಿಂಸಾಚಾರವನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರತಿಪಕ್ಷಗಳು ಶತ ಪ್ರಯತ್ನ ನಡೆಸುತ್ತಿವೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಿಂದಲೇ ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಮಾತನಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.