ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಪ್ರಕರಣ, ಮುಡಾ ಹಗರಣವೂ ಸಭೆಯಲ್ಲಿ ಸಂಚಲನ ಮೂಡಿಸಿದ್ದು. ಈಗ ಮತ್ತೊಂದು ಹೆಜ್ಜೆ ಮುಂದುವರೆದು ಬಿಜೆಪಿ ಶನಿವಾರದಿಂದ ಮೈಸೂರು ಚಲೋ ಪಾದಯಾತ್ರೆ ಆರಂಭಿಸಿದ್ದು, ಕಾಂಗ್ರೆಸ್ ರಾಜಕೀಯವಾಗಿ ಸ್ಪಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ದಾಖಲೆಗಳನ್ನು ಹಾಜರುಪಡಿಸಿ ನಾನೇನೂ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ದಾಖಲೆಗಳ ಹೊರತಾಗಿಯೂ, ರಾಜಕೀಯ ಸ್ವರೂಪ ಪಡೆದುಕೊಂಡಿರುವ ಕಾರಣಕ್ಕೋಸ್ಕರ ರಾಜಕೀಯವಾಗಿಯೇ ಕೌಂಟರ್ ಕೊಡಲು ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ
ಬಿಜೆಪಿ ಮುಡಾ-ವಾಲ್ಮೀಕಿ ಪ್ರಕರಣದತ್ತ ಗಮನ ಹರಿಸುತ್ತಿದ್ದರೆ, ಕಾಂಗ್ರೆಸ್ ಕೂಡ ಪ್ರತಿಘಟನೆಗೆ ತಯಾರಿ ಆರಂಭಿಸಿದೆ. ಇದನ್ನೇ ಮುಂದುವರೆಸಿದರೆ, ವಿಷಯ ಎಲ್ಲೋ ಹೋಗಿ ಸರ್ಕಾರದ ಬುಡಕ್ಕೆ ಬಂದರೂ ಆಶ್ಚರ್ಯವಿಲ್ಲ ಎಂಬ ಕಾರಣಕ್ಕೆ ರಾಜಕೀಯ ಪ್ರತಿಕ್ರಿಯೆಯನ್ನು ಸೃಷ್ಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ಕಾಂಗ್ರೆಸ್ ದ್ವಿಮುಖ ಸಮರವನ್ನು ಯೋಜಿಸಿದೆ.
ಮೈಸೂರಿನಲ್ಲಿ ಮುಡಾ ಪ್ರಕರಣದ ಕುರಿತು ಮಹತ್ವದ ಸಮಾವೇಶ ಆಯೋಜಿಸಲು ಪಕ್ಷದ ಕಡೆಯಿಂದ ಚಿಂತನೆ ನಡೆದಿದೆ. ಇನ್ನೊಂದೆಡೆ ಸಿಎಂ ಆಪ್ತರು ಅಹಿಂದ ಅಸ್ತ್ರ ಪ್ರಯೋಗಿಸತೊಡಗಿದ್ದಾರೆ.
ಕೆಎನ್ ರಾಜಣ್ಣ ಹಾಗೂ ಸಿದ್ದರಾಮಯ್ಯ ಬೆನ್ನಿಗೆ ನಿಂತಿರೋ ಶೋಷಿತ ಸಮುದಾಯಗಳ ಒಕ್ಕೂಟ ಬಿಜೆಪಿ ವಿರುದ್ಧ ಪರ್ಯಾಯ ಪಾದಯಾತ್ರೆಗೆ ಚಿಂತನೆ ನಡೆಸಿದೆ. ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದು ಅಹಿಂದ ನಾಯಕನೊಬ್ಬನ ವಿರುದ್ಧ ಬಿಜೆಪಿ ಅನಗತ್ಯ ರಾಜಕೀಯ ದಾಳಿ ನಡೆಸಿದೆ ಎಂದು ಆರೋಪಿಸಲು ನಿರ್ಧರಿಸಿದ್ದಾರೆ.