Friday, January 9, 2026

ಮಸೀದಿಯಲ್ಲಿ ಕಾಂಗ್ರೆಸ್​ ಉಪಾಧ್ಯಕ್ಷನಿಗೆ ಚಾಕು ಇರಿತ: ಚಿಕಿತ್ಸೆ ಫಲಕಾರಿಯಾಗದೇ ಸಾವು

ಹೊಸದಿಗಡಂತ ಡಿಜಿಟಲ್‌ ಡೆಸ್ಕ್‌:

ಮಸೀದಿಯಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಮಹಾರಾಷ್ಟ್ರ ಕಾಂಗ್ರೆಸ್​ ಉಪಾಧ್ಯಕ್ಷ ಹಿದಾಯತುಲ್ಲಾ ಪಟೇಲ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿದಾಯತುಲ್ಲಾ ಪಟೇಲ್​ ಅವರು ಮಂಗಳವಾರ ಅಕೋಲಾ ಜಿಲ್ಲೆಯ ಅಕೋಟ್ ತಾಲೂಕಿನ ಮೊಹಲಾ ಗ್ರಾಮದ ಮಸೀದಿಯಲ್ಲಿ ನಮಾಜ್​ಗೆ ತೆರಳಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ನಮಾಜ್​ ಬಳಿಕ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ಹರಿತ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಪಟೇಲ್ ಅವರ ಕುತ್ತಿಗೆ ಮತ್ತು ಎದೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿತ್ತು. ತಕ್ಷಣವೇ ಅಕೋಟ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಿಧನರಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಪ್ರಾರ್ಥನೆಗಾಗಿ ಪಟೇಲ್ ಅವರು ಮೊಹಲಾದ ಜಾಮಾ ಮಸೀದಿಯಲ್ಲಿದ್ದರು. ನಮಾಜ್​ ಮುಗಿಸಿ ಹೊರಬರುತ್ತಿದ್ದಂತೆ ದುಷ್ಕರ್ಮಿಯೋರ್ವ ಅವರ ಮೇಲೆ ಹಲ್ಲೆ ಮಾಡಿದ್ದು, ಪಟೇಲ್ ರಕ್ತಸಿಕ್ತ ಬಟ್ಟೆಗಳಿಂದ ಮಸೀದಿಯಿಂದ ಹೊರಬರುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.

ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಧಿವಿಜ್ಞಾನ ತಜ್ಞರ ಸಹಾಯದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಆರೋಪಿಯನ್ನು ಬಂಧಿಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಕೋಟ್ ತಾಲ್ಲೂಕಿನ ಪಣಜ್ ಗ್ರಾಮದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಚಂದ್ರಕಾಂತ್ ರೆಡ್ಡಿ ತಿಳಿಸಿದ್ದಾರೆ.

error: Content is protected !!