ಹೊಸದಿಗಂತ ಡಿಜಿಟಲ್ ಡೆಸ್ಕ್:
“ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿಸ್ಸೀಮ ಪರಿಶ್ರಮದಿಂದ ಭಾರತದ ಆರ್ಥಿಕ ಸ್ಥಿತಿ 14ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿದೆ. ಇನ್ನು ಕೆಲವೇ ದಿನಗಳಲ್ಲಿ ದೇಶ 3ನೇ ಸ್ಥಾನವನ್ನು ದಕ್ಕಿಸಿಕೊಳ್ಳಲಿದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ಈ ಸಾಧನೆಗಳು ಗೋಚರಿಸುತ್ತಿಲ್ಲ,” ಎಂದು ಚಳ್ಳಕೆರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ತೀಕ್ಷ್ಣ ಟೀಕೆ ಮಾಡಿದ್ದಾರೆ.
ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿಗೆ ಅಭಿನಂದನಾ ಸಮಾರಂಭವಾಗಿದ್ದು, ವಿವಿಧ ಮಂಡಲಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೂ ವೇದಿಕೆ ಆಗಿತ್ತು.
ಕಾರಜೋಳ ಅವರು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ತೀವ್ರವಾಗಿ ಟೀಕಿಸಿ, “ಇವರು ಕಳೆದ ಎರಡು ವರ್ಷಗಳಲ್ಲಿ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡ ಯೋಜನೆಗಳನ್ನು ಹೊಸ ಹೆಸರಿನಲ್ಲಿ ಉದ್ಘಾಟಿಸುತ್ತಿದ್ದಾರೆ. ಜನರ ಶಾಪದಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ,” ಎಂದು ಹೇಳಿದರು.
“ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹೊಂದಾಣಿಕೆ ಕೊರತೆ ಇದೆ. ಅಧಿಕಾರದ ಆಂತರಿಕ ಹೊಡೆತದಿಂದ ಕಾಂಗ್ರೆಸ್ ಪತನವು ಅನಿವಾರ್ಯವಾಗಿದೆ. 2025ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ,” ಎಂದು ಭವಿಷ್ಯವಾಣಿ ನೀಡಿದರು.
ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ ಕಾರಜೋಳ, “ಹಾಲು, ವಿದ್ಯುತ್, ಬಸ್ ಶುಲ್ಕ, ಅಗತ್ಯ ವಸ್ತುಗಳ ದರ ಏರಿಕೆ ಮೂಲಕ ಕಾಂಗ್ರೆಸ್ ಸರ್ಕಾರ ಪ್ರತಿ ಮನೆಯಲ್ಲೂ ತಿಂಗಳಿಗೆ 10,000 ರೂಪಾಯಿ ವೆಚ್ಚ ಹೆಚ್ಚಿಸಿದೆ. ಉಚಿತ ಬಸ್ ಸೇವೆ, ಗೃಹಲಕ್ಷ್ಮಿ ಯೋಜನೆಗಳ ವಿರುದ್ಧ ಜನರಲ್ಲಿ ಅಸಮಾಧಾನ ಉಂಟಾಗಿದೆ. ಶಾಸಕರಿಗೂ ಅಭಿವೃದ್ಧಿ ಅನುದಾನ ನೀಡದೆ ಕಾಂಗ್ರೆಸ್ ಸರ್ಕಾರ ಅಸಮರ್ಪಕ ಆಡಳಿತ ನೀಡುತ್ತಿದೆ,” ಎಂದು ದೂರಿದರು.