ಹೊಸದಿಗಂತ ಹುಬ್ಬಳ್ಳಿ:
ಮಾಜಿ ಸಚಿವ ಎಸ್. ಟಿ. ಸೋಮಶೇಖರ ಅತಂತ್ರರಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹರಿಹಾಯ್ದರು.
ಎಸ್. ಟಿ. ಸೋಮಶೇಖರ ಹೇಳಿಕೆ ವಿಚಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಾದರೂ ಮುಳಗುವ ಹಡುಗಿನಲ್ಲಿ ಕೂರಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಸ್.ಟಿ ಸೋಮಶೇಖರ ಅವರು ಕಾಂಗ್ರೆಸ್ ನಲ್ಲಿಯೂ ಇಲ್ಲ. ಬಿಜೆಪಿ ಯಲ್ಲಿ ಇದ್ದು ಇಲ್ಲದಂತಾಗಿದೆ. ಆದ್ದರಿಂದ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದ 20 ರಾಜ್ಯದಲ್ಲಿ ಬಿಜೆಪಿ ಪಕ್ಷವಿದೆ. ಪ್ರಧಾನಿ ನರೇಂದ್ರ ಮೋದಿ ದೇಶ ಮುನ್ನಡೆಸುತ್ತಿದ್ದಾರೆ. ಆದ್ದರಿಂದ ಬಿಜೆಪಿಗೆ ಯಾವುದೇ ಹಾನಿಯಾಗುವುದಿಲ್ಲ. ಮಹಾರಾಷ್ಟ್ರ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ. ಶಾಸಕರು ಅಳುತ್ತಿದ್ದು, ವಿಷಯ ಕುಡಿಯಲು ಸಹ ಅನುದಾನವಿಲ್ಲವಾಗಿದೆ. ಹಿರಿಯ ಕಾಂಗ್ರೆಸ್ ಶಾಸಕರೇ ಈ ಮಾತು ಹೇಳುತ್ತಿದ್ದಾರೆ. ಕಾಂಗ್ರೆಸ್ ಗೆ ಭವಿಷ್ಯವಿಲ್ಲ ಎಂದು ಕುಟುಕಿದರು.
ಚುನಾವಣೆ ಗೆಲ್ಲುವುದು ಮಾನದಂಡವಾಗಿದೆ. ಜನರ, ಕಾರ್ಯಕರ್ತರ ಅಭಿಪ್ರಾಯದಂತೆ ಗೆಲ್ಲುವ ಅಭ್ಯರ್ಥಿ ಟಿಕೆಟ್ ನೀಡಬೇಕಾಗುತ್ತದೆ. ಇನ್ನೂ ಸಾಮಾನ್ಯವಾಗಿ ಜಾತಿ ನೋಡಿ ಅಭ್ಯರ್ಥಿ ಆಯ್ಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಭರತ್ ಬೊಮ್ಮಾಯಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಇಂದು ನಾವೆಲ್ಲರೂ ಅವರ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇವೆ ಎಂದು ಹೇಳಿದರು.