ಹೊಸದಿಗಂತ ಡಿಜಿಟಲ್ ಡೆಸ್ಕ್
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಾರ್ವಕಾಲಿಕ ಕುಸಿತ ಕಾಣಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರ ಮತ್ತು ಕೃಷ್ಣಾನಗರದಲ್ಲಿ ಸರಣಿ ರ್‍ಯಾಲಿಗಳನ್ನು ನಡೆಸಿದ ಅವರು, ‘ಚುನಾವಣೋತ್ತರ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳ ಅಗತ್ಯವೇ ಇಲ್ಲ. ಕಾಂಗ್ರೆಸ್ ಸೋಲಿನ ಬಗ್ಗೆ ನಾನು ಬಹಳ ಹಿಂದೆಯೇ ಸಂಸತ್‌ನಲ್ಲಿ ಹೇಳಿದ್ದೇನೆ. ಅವರ ಹಿರಿಯ ನಾಯಕಿ ತಮ್ಮ ಲೋಕಸಭಾ ಸ್ಥಾನ ತ್ಯಜಿಸಿ ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಿದಾಗಲೇ, ಅವರಿಗೆ ತಮ್ಮ ಸೋಲಿನ ಅರಿವಾಗಿದೆ ಎನ್ನುವುದು ಸ್ಪಷ್ಟವಾಗಿತ್ತು’ ಎಂದು ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸದೆಯೇ ಹೇಳಿದರು.
ಈ ವೇಳೆ ತೃಣಮೂಲ ಕಾಂಗ್ರೆಸ್ ಬಗ್ಗೆ ವಾಗ್ದಾಳಿ ನಡೆಸಿದ ಮೋದಿ, ಪಕ್ಷವು ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದು, ರಾಜ್ಯದಲ್ಲಿ ಹಿಂದುಗಳನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿದರು.
ಹಿಂದುಗಳು ಬಂಗಾಳದಲ್ಲಿ ಎರಡನೆಯ ದರ್ಜೆಯ ಪ್ರಜೆಗಳಾಗಿರುವುದು ಏಕೆ? ಟಿಎಂಸಿಯ ಶಾಸಕರೊಬ್ಬರು ಇತ್ತೀಚೆಗೆ ಎಲ್ಲ ಹಿಂದುಗಳನ್ನು ಭಾಗೀರಥಿ ನದಿಯಲ್ಲಿ ಎಸೆಯುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದು ಯಾವ ಬಗೆಯ ರಾಜಕಾರಣ? ಟಿಎಂಸಿಗೆ ಮಾನವೀಯತೆಗಿಂತ ಓಲೈಕೆಯೇ ಮುಖ್ಯವಾಯಿತೇ? ಎಂದು ಹುಮಾಯೂನ್ ಕಬೀರ್ ಅವರ ಹೇಳಿಕೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಆಡಳಿತಾರೂಢ ಪಕ್ಷದ ಮುಖಂಡರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಎದುರಾಗಿರುವ ಸಂದೇಶ್‌ಖಾಲಿಯ ಸಂತ್ರಸ್ತರ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಿಸಿದರು.
ಈ ವೇಳೆ ಶಾಲಾ ನೇಮಕಾತಿ ಹಗರಣ ಪ್ರಸ್ತಾಪಿಸಿದ ಅವರು, ‘ವಿವಿಧ ಹಗರಣಗಳ ಮೂಲಕ ಬಂಗಾಳದ ಜನರನ್ನು ಲೂಟಿ ಮಾಡುವುದರಲ್ಲಿ ತೊಡಗಿರುವ ಅಪರಾಧಿಗಳನ್ನು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ’ ಎಂದು ಭರವಸೆ ನೀಡಿದರು.