ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ: ಸಚಿವ ಸಂತೋಷ್ ಲಾಡ್

ಹೊಸದಿಗಂತ ವಿಜಯಪುರ:

ಬಿಜೆಪಿ ಬರೀ ಸುಳ್ಳು ಪ್ರಚಾರ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದು, ಬಿಜೆಪಿಯ ಸುಳ್ಳು ಜನತೆಗೆ ಅರ್ಥವಾಗುತ್ತಿದೆ. ರಾಜ್ಯದಲ್ಲಿ 15 ರಿಂದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಚುನಾವಣೆ ವಿಷಯ ಮಾಡಿಕೊಂಡಿಲ್ಲ. ಬರೀ ವಿವಾದ ಹುಟ್ಟು ಹಾಕಿ ಜನರ ಭಾವನೆ ಕೆರಳಿಸಿ ಮತ ಯಾಚನೆಗೆ ಮುಂದಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡವರಿಗೆ ಹಣ ದೊರೆಯುತ್ತಿದೆ. ಜನರು ಸಂತೋಷದಿಂದ ಇದ್ದಾರೆ. ಹಾಗಾಗಿ ಕಾಂಗ್ರೆಸ್ ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದೆ. ಅದೇ ರೀತಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಗೆಲವು ಸಾಧಿಸಲಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ನೇಹಾ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮವಾಗುತ್ತದೆ. ನೇಹಾ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದರು.

ಬಿಜೆಪಿಯವರು ಬರೀ ಧಾರ್ಮಿಕ ವಿಚಾರಗಳನ್ನು ಕೆದಕುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರಕ್ಕೆ ಹೋದಲೆಲ್ಲ ಜೈ ಶ್ರೀರಾಮ ಎನ್ನುತ್ತಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ದಿಂಗಾಲೇಶ್ವರ ಸ್ವಾಮಿ ಅವರು ಚುನಾವಣೆಗೆ ನಿಲ್ಲಲು ಕಾಂಗ್ರೆಸ್ ಹಣ ನೀಡಿದ ಬಗ್ಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಆರೋಪ ನನಗೆ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅವರನ್ನೇ ಕೇಳಬೇಕು ಎಂದರು.

ಶಾಸಕ ಯತ್ನಾಳ ಬೇರೆಯವರ ವಿರುದ್ಧ ನಿರಾಧಾರವಾಗಿ ಆರೋಪ ಮಾಡುತ್ತಾರೆ. ಮತ್ತೊಬ್ಬರ ಬಗ್ಗೆ ಟೀಕಿಸುವುದನ್ನು ಅವರು ರೂಢಿಸಿಕೊಂಡಿದ್ದಾರೆ ಎಂದರು.

ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here