ಹೊಸದಿಗಂತ ಯಾದಗಿರಿ
ರಾಜ್ಯದ ಕಾಂಗ್ರೆಸ್ ಸರ್ಕಾರವು ಲೂಟಿ ಮತ್ತು ಸುಳ್ಳಿನ ಮೇಲೆ ನಿಂತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.
ಮಹಾರಾಷ್ಟ್ರ ಗಡಿ ಭಾಗದಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂಪಾಯಿ ಹಗರಣದ ಹಿಂದೆ ಕರ್ನಾಟಕದ ಕಾಂಗ್ರೆಸ್ ನಾಯಕರ ಕೈವಾಡವಿದೆ. ಅಲ್ಲಿ ಬಿಜೆಪಿ ಸರ್ಕಾರವಿದ್ದರೂ, ಕಾಂಗ್ರೆಸ್ ನಾಯಕರು ತಮ್ಮ ಪ್ರಭಾವ ಬಳಸಿ ಲೂಟಿಯ ಜಾಲವನ್ನು ಹರಡಿದ್ದಾರೆ ಎಂದು ಅವರು ದೂರಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳಿನ ಸರದಾರರು. ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ಅತ್ಯಂತ ನಿಸ್ಸೀಮರು. ಇಡೀ ರಾಜ್ಯವನ್ನು ಲೂಟಿ ಮಾಡಿ ಸರ್ಕಾರ ನಡೆಸುವಂತಹ ಹೀನಾಯ ಸ್ಥಿತಿಗೆ ಅವರು ತಲುಪಿದ್ದಾರೆ,” ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯಿಂದ ರಾಜ್ಯದ ಜನತೆ ಈಗಾಗಲೇ ರೋಸಿ ಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತಷ್ಟು ಬಲಗೊಳ್ಳಲಿದ್ದು, ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಹಸ್ತವು ನೆರೆ ರಾಜ್ಯಗಳಿಗೂ ವಿಸ್ತರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಛಲವಾದಿ ನಾರಾಯಣಸ್ವಾಮಿ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.




