ಹೊಸದಿಗಂತ ಚಿತ್ರದುರ್ಗ:
ಇತ್ತೀಚಿನ ದಿನಮಾನಗಳಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ಮೇಲೆ ಅತ್ಯಂತ ಹಗುರವಾಗಿ ಹಾಗೂ ಬೇಜವ್ದಾರಿಯಿಂದ ಮಾತನಾಡುತ್ತಿರುವ ಕಾಂಗ್ರೆಸ್ಸಿಗರಿಂದ ದೇಶಕ್ಕೆ ಅಪಾಯ ಕಾದಿದೆ. ದೇಶದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಲಿಕೆ ನೀಡಿರುವ ಅವರು, ಕಾಂಗ್ರೇಸ್ಸೇತರ ಪಕ್ಷಗಳು ಈ ದೇಶವನ್ನು ಆಳುತ್ತಿರುವುದನ್ನು ಕಾಂಗ್ರೆಸ್ಸಿಗರಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ಪದೇ ಪದೇ ಈ ದೇಶದ ಸ್ವಾಯತ್ತ ಸಂಸ್ಥೆಗಳಾದ ಇ.ಡಿ., ಸಿ.ಬಿ.ಐ., ಚುನಾವಣಾ ಆಯೋಗ, ಇಂತಹ ಸಂಸ್ಥೆಗಳ ವಿರುದ್ದ ಕಾಂಗ್ರೆಸ್ಸಿಗರು ಅತ್ಯಂತ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಕಾಂಗ್ರೆಸ್ಸಿಗರು ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನೂ ಸಹ ಅನುಮಾನದಿಂದ ನೋಡುವ ಕಾಲ ದೂರವಿಲ್ಲ ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ಲೋಕಸಭಾ ಕ್ಷೇತ್ರವೊಂದರಲ್ಲಿ ಅದರಲ್ಲೂ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಯಾವ ರೀತಿ ಲೋಪವಾಗಿದೆ ಎಂಬ ಬಗ್ಗೆ ದಾಖಲೆಗಳ ಸಮೇತ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ. ಅದನ್ನು ಬಿಟ್ಟು ಕೇವಲ ಬಿಟ್ಟಿ ಪ್ರಚಾರಕ್ಕಾಗಿ ಹಾದಿ ಬೀದಿಯಲ್ಲಿ ಮಾತನಾಡುತ್ತಾ ಹೋಗುವುದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶೋಭೆ ತರುವ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಯಾರಾದರೂ ಆರೋಪ ಮಾಡಿದರೆ, ಆರೋಪ ಮಾಡಿದವರಿಗೆ ನೋಟಿಸ್ ನೀಡುವ ಹಕ್ಕು ಚುನಾವಣಾ ಆಯೋಗಕ್ಕಿದೆ. ಅದೇ ರೀತಿ ಆರೋಪ ಮಾಡಿರುವ ರಾಹುಲ್ ಗಾಂಧಿಯವರಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ. ಇವರ ಬಳಿ ದಾಖಲೆಯಿದ್ದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.
ಇದೀಗ ರಾಹುಲ್ ಗಾಂಧಿ ಚುನಾವಣಾ ಆಯೋಗ, ನ್ಯಾಯಾಂಗದ ವಿರುದ್ಧವಾಗಿ ರಾಷ್ಟ್ರದ ಜನತೆಯನ್ನು ದಂಗೆ ಏಳಲು ಪ್ರಚೋದಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದನ್ನು ಪ್ರತಿಯೊಬ್ಬ ಭಾರತೀಯ ನಾಗರೀಕರು ಖಂಡಿಸಲೇಬೇಕು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ೧೩೬ ಕ್ಷೇತ್ರ ಗೆದ್ದಾಗ ಯಾಕೆ ನೀವು ಚುನಾವಣಾ ಆಯೋಗದ ಮೇಲೆ ಅನುಮಾನ ಪಡಲಿಲ್ಲ. ಇವತ್ತು ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದಿದೆ. ಅವಾಗ ಯಾಕೆ ನೀವು ಅನುಮಾನ ಪಡಲಿಲ್ಲ. ನಿಮ್ಮ ಪಕ್ಷ ಕಾಂಗ್ರೆಸ್ ಗೆದ್ದರೆ ಅಷ್ಟೆ ಚುನಾವಣೆ ಆಯೋಗ ಸರಿಯಿದೆ. ಇಲ್ಲದಿದ್ದರೆ ಚುನಾವಣಾ ಆಯೋಗವು ಫ್ರಾಡ್ ಮಾಡಿದೆ ಎಂದು ಆರೋಪಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಂತಹ ಸಂವಿಧಾನಿಕ ಸಂಸ್ಥೆ ದೇಶದ ಅತೀ ಶ್ರೇಷ್ಠವಾದ ಸಂಸ್ಥೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ. ಪ್ರಜಾಪ್ರಭುತ್ವದ ವ್ಯವಸ್ಥೆಯ ಪ್ರತಿಪಕ್ಷದ ನಾಯಕರು ಈ ರೀತಿ ಸುಳ್ಳು ಆರೋಪ ಮಾಡುವುದರಿಂದ, ಬೀದಿ ನಾಟಕ ಮಾಡುವುದರಿಂದ, ನೀವು ಬೀದಿ ಕಲಾವಿದರಾಗುತ್ತೀರಿ ಹೊರತು, ದೇಶದ ನಾಯಕರಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಯವರಿಗೆ ಎಚ್ಚರಿಸಿದ್ದಾರೆ.
ಕರ್ನಾಟಕದಲ್ಲಿ ಸೋಮವಾರ ನಡೆದ ಅತ್ಯಂತ ಅಪಾಯಕಾರಿ ಬೆಳವಣಿಗೆ. ದಲಿತ ಮಂತ್ರಿ ಅತ್ಯುತ್ತಮ ಕೆಲಸಗಳನ್ನು ಮಾಡಿದವರು. ಸುಮಾರು ೪೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಕೆ.ಎನ್.ರಾಜಣ್ಣರವರು ಶಾಸಕರಾಗಿ, ಮಂತ್ರಿಯಾಗಿ ಸಮಾಜದಲ್ಲಿ ಗೌರವವನ್ನು ಊಳಿಸಿಕೊಂಡು ಬಂದಿದ್ದಾರೆ. ಅವರು ರಾಹುಲ್ ಗಾಂಧಿಯವರ ಮತಗಳ್ಳತನದ ಆರೋಪವನ್ನು ಸಮರ್ಥಿಸಿಕೊಳ್ಳಲಿಲ್ಲ ಎಂಬ ಕಾರಣದಿಂದ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಲಾಗಿದೆ. ಇಂತಹ ಘಟನೆಯಿಂದ ಕಾಂಗ್ರೇಸ್ ಪಕ್ಷ ದಲಿತರನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎಂದು ತಿಳಿಯುತ್ತದೆ ಎಂದು ಕಾರಜೋಳ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಅಹಿಂದ ವರ್ಗದ ಜನರಿಗೆ ಹೊರತು, ಮುಂದುವರೆದ ಶ್ರೀಮಂತರಿಗಲ್ಲ. ಶ್ರೀಮಂತರು ಬ್ರಿಟೀಷ್ ಸರ್ಕಾರದಲ್ಲೂ ಕೂಡ ಸಣ್ಣ ಇಲಾಖೆಯಲ್ಲಿ ಆಸ್ತಿ, ಅಧಿಕಾರ ಪಡೆದಿದ್ದರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾತ್ರ ಹಿಂದುಳಿದ ದಲಿತರಿಗೆ ಅವಕಾಶ. ಅದಕ್ಕಾಗಿ ಕರ್ನಾಟಕ ರಾಜ್ಯದ ಜನ ಕೆ.ಎನ್. ರಾಜಣ್ಣ ಅವರ ಬೆಂಬಲಕ್ಕೆ ನಿಲ್ಲಬೇಕು ನಿಲ್ಲಬೇಕು. ಕಾಂಗ್ರೆಸ್ ನೀತಿಯನ್ನು ಖಂಡಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಕರೆ ನೀಡಿದ್ದಾರೆ.