ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಸಚಿವರು, ಶಾಸಕರು ಮನಬಂದಂತೆ ಮಾತನಾಡುತ್ತಿರುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನತೆಯೇ ತಕ್ಕ ಉತ್ತರ ನೀಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಹೃದಯ ಸಮಸ್ಯೆ ಇದೆ. ಯಾರು ಅವರ ಎದೆಯನ್ನು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಎದೆ ಮೇಲೆ 5 ಇಂಚು ಕೊಯ್ದ ಗಾಯದ ಗುರುತು ಇದೆ. ಅದು ಇನ್ನೂ ಮಾಸಿಲ್ಲ. ಇದನ್ನು ತಿಳಿಯದ ಕೆಲವರು ಅವರ ವಿರುದ್ಧ ಲೇವಡಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ತಂತ್ರಜ್ಞಾನವನ್ನು ಎಲ್ಲರೂ ಗೂಗಲ್ನಲ್ಲಿ ಸರ್ಚ್ ಮಾಡಬಹುದು. ಮೂರೇ ದಿನದಲ್ಲಿ ಚೇತರಿಸಿಕೊಳ್ಳುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದಿದೆ. ಆದರೆ ಕ್ಷೇತ್ರದ ಶಾಸಕರಿಗೆ ಈ ಬಗ್ಗೆ ಅರಿವೇ ಇಲ್ಲ. ನಮ್ಮ ಪಕ್ಷದಲ್ಲೇ ಬೆಳೆದು, ಇಡೀ ಕುಟುಂಬವೇ ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಈಗ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ. ಜನತೆ ಇದನ್ನು ನೋಡುತ್ತಿದ್ದಾರೆ.ಅವರೇ ಎಲ್ಲದ್ದಕ್ಕೂ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಬದಲಾದ ಕಾಲಘಟ್ಟದಲ್ಲಿ ನಾನು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. 2019ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೂ ನಮ್ಮದೇ ಪಕ್ಷದ ಶಾಸಕರು ಇದ್ದರು. ಆದರೂ ನಾನು ಸೋಲನ್ನೂ ಅನುಭವಿಸಬೇಕಾಯಿತು. ಆಗ ನಮ್ಮ ಕಾರ್ಯಕರ್ತರಿಗೆ ನೋವು ಆಕ್ರೋಶ ಉಂಟುಮಾಡಿತ್ತು. ಇದಕ್ಕೆ ಮತದಾರರು, ಕಾರ್ಯಕರ್ತರು ಹೊಣೆಯಲ್ಲ, ನಾವೇ ಹೊಣೆ ಎಂದು ಹೇಳಿದರು.