ಛಲವಾದಿ ನಾರಾಯಣ ಸ್ವಾಮಿ ಎದುರು ಕಾಂಗ್ರೆಸ್ಸಿಗರ ದುರ್ವರ್ತನೆ: ರೂಪಾಲಿ ನಾಯ್ಕ ಖಂಡನೆ

ಹೊಸದಿಗಂತ ವರದಿ, ಕಾರವಾರ :

ಕಾಂಗ್ರೆಸ್ ಪಕ್ಷದ ಗೂಂಡಾಗಳು ವಿಪಕ್ಷ ನಾಯಕನ ಹುದ್ದೆಯಲ್ಲಿದ್ದು, ಶೋಷಿತ ಸಮುದಾಯಗಳ ನಾಯಕರೂ ಆಗಿರುವ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಕಲಬುಗಿಯ ಚಿತ್ತಾಪುರದ ಅತಿಥಿಗೃಹದಲ್ಲಿ ದಿಗ್ಬಂಧನದಲ್ಲಿ ಇಟ್ಟ ಘಟನೆ ದಿಗ್ಭ್ರಮೆ ಉಂಟುಮಾಡಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಇದೆಯೇ ಅಥವಾ ಸರ್ವಾಧಿಕಾರಿ ಆಡಳಿತ ಇದೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಪ್ರಶ್ನಿಸಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಅವರನ್ನು ದಿಗ್ಬಂಧನದಲ್ಲಿ ಇಟ್ಟು, ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ. ಅವರ ಕಾರಿಗೆ ಬಣ್ಣ ಎರಚಲಾಗಿದೆ. ಅವರು ಹೇಳಿಕೆ ನೀಡಿದ್ದಕ್ಕೆ ಪ್ರತ್ಯುತ್ತರ ನೀಡಬೇಕಾದದ್ದು ಸಾಂವಿಧಾನಿಕ ನಡೆ.

ಬಾಯಿ ತೆಗೆದರೆ ಸಂವಿಧಾನ ಹೇಳುವ ಕಾಂಗ್ರೆಸ್ಸಿಗರು ಛಲವಾದಿ ನಾರಾಯಣ ಸ್ವಾಮಿ ಅವರ ವಿರುದ್ಧ ಸಂವಿಧಾನ ವಿರೋಧಿ ನಡವಳಿಕೆ ಪ್ರದರ್ಶಿಸಿದ್ದಾರೆ. ಪ್ರತಿಪಕ್ಷದ ನಾಯಕರನ್ನು ಹತ್ತಿಕ್ಕುವ ಹುನ್ನಾರ ಈ ವರ್ತನೆಯ ಹಿಂದಿದೆ. ಅದಿಲ್ಲ ಅಂತಾದರೆ ಛಲವಾದಿ ನಾಯಕನ ರಕ್ಷಣೆಗೆ ಸರ್ಕಾರ ನಿಲ್ಲಬೇಕು ಮತ್ತು ಅವರ ವಿರುದ್ಧ ಅನಾಗರಿಕವಾಗಿ ನಡೆದುಕೊಂಡವರ ಮೇಲೆ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟಕ್ಕಿಳಿಯುವುದು ಅನಿವಾರ್ಯ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ರೂಪಾಲಿ ಎಸ್.ನಾಯ್ಕ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!