ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಜನಪ್ರಿಯ ಯೋಜನೆಗಳನ್ನು ದ್ವೇಷ ರಾಜಕಾರಣದಿಂದ ಕೈಬಿಡಲಾಗಿದ್ದು, ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಆ.7 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮೋರ್ಚಾ ಉಪಾಧ್ಯಕ್ಷ ಷಣ್ಮಖ ಗುರಿಕಾರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ನೀತಿಗಳಾದ ಎಪಿಎಂಸಿ ಕಾನೂನು ರದ್ದುಪಡಿಸಿದ್ದು, ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಿಸಿದ್ದು, ರೈತ ವಿದ್ಯಾನಿಧಿ ಯೋಜನೆ ಕೈಬಿಟ್ಟಿದ್ದು, ಗೋ ಶಾಲೆ ರದ್ದು ಪಡಿಸಿದ್ದಾರೆ ಎಂದರು.
ಭೂ ಸಿರಿ ಯೋಜನೆ ಕೈಬಿಟ್ಟಿದ್ದಾರೆ. 51 ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಂತೆ 4 ಸಾವಿರ ಕಿಸಾನ್ ಸನ್ಮಾನ ಯೋಜನೆಯಿಂದ ಬರುತ್ತಿರುವುದು ತಡೆ ಇದೇ ರೀತಿ 19 ಕ್ಕೂ ಹೆಚ್ಚು ಯೋಜನೆ ಕೈಬಿಟ್ಟು ರೈತರಿಗೆ ಅನ್ಯಾಯ ಮಾಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಿರೀಕ್ಷೆ ಇಲ್ಲದ ಸೋಲು ಕಂಡಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆ ಗೆಲ್ಲುವ ಗುರಿ ಇದೆ. ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಸದ್ಯದಲ್ಲೇ ವಿರೋಧ ಪಕ್ಷದ ನಾಯಕರ ಆಯ್ಕೆ ನಮ್ಮ ವರಿಷ್ಠರು ಮಾಡುತ್ತಾರೆ ಎಂದರು.
ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂಬುವುದು ನಮ್ಮ ಆಗ್ರಹ. ಮಹದಾಯಿ ಸಲುವಾಗಿ ನಮ್ಮ ಪಕ್ಷದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಈ ವಿಚಾರ ವಾಗಿ ನಮ್ಮ ಪಕ್ಷದ ಹಿರಿಯರ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಹು-ಧಾ ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ, ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಇದ್ದರು.