October 12, 2026
Monday, October 12, 2026
spot_img

ಕೇಂದ್ರ ದೆಹಲಿಯಲ್ಲಿ ಪ್ರತಿಭಟನೆ ಕಾವು: 6 ಮೆಟ್ರೋ ನಿಲ್ದಾಣಗಳ ಪ್ರವೇಶ, ನಿರ್ಗಮನ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿರೋಧ ಪಕ್ಷಗಳು ಇಂದು ಸುಪ್ರೀಂ ಕೋರ್ಟ್‌ ಚಲೋ ಬೃಹತ್‌ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿವೆ. ಕಾಂಗ್ರೆಸ್‌ನ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೇಂದ್ರ ದೆಹಲಿಯ ಪ್ರಮುಖ ಆರು ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರವನ್ನು ಬೆಳಗ್ಗೆ ಆರರಿಂದ ಸಂಜೆ ನಾಲ್ಕು ಗಂಟೆವರೆಗೆ ಬಂದ್‌ ಮಾಡಲಾಗಿದೆ.

ಈ ಹಿಂದೆ ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆ ವೇಳೆ 45 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಅದಾದ ಎರಡು ದಿನಗಳ ಬಳಿಕ ಇದೀಗ ಆರು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಈ ಬಗ್ಗೆ ದೆಹಲಿ ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದ್ದು, ಪಟೇಲ್ ಚೌಕ್, ಜನಪಥ್, ರಾಜೀವ್ ಚೌಕ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯೇಟ್, ಬಾರಾಖಂಬಾ ರಸ್ತೆಯಲ್ಲಿರುವ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ಈ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದ್ದರೂ, ಮೆಟ್ರೋ ಮಾರ್ಗ ಬದಲಾವಣೆ ಸೌಲಭ್ಯವು ಎಂದಿನಂತೆ ಲಭ್ಯವಿರಲಿದೆ ಎಂದು ಹೇಳಿದೆ.

ಸಿಕ್ಕಾಪಟ್ಟೆ ಟ್ರಾಫಿಕ್‌ ಜಾಮ್‌

ಸಾಮಾನ್ಯವಾಗಿಯೇ ಪ್ರತಿಭಟನೆಗಳ ವೇಳೆ ದೆಹಲಿಯ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಇರುತ್ತದೆ. ಇದೀಗ ಪ್ರತಿಭಟನೆಯ ಜೊತೆ ಮೆಟ್ರೋ ಓಡಾಟ ಬಂದ್‌ ಆಗಿರುವ ಕಾರಣ ಕ್ಯಾಬ್‌, ಆಟೋ, ಬಸ್‌, ಕಾರ್‌ಗಳ ಮೇಲೆ ಜನ ಅವಲಂಬಿತರಾಗಿರುತ್ತಾರೆ. ಹೀಗಾಗಿ ತೀವ್ರ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಇದರ ಜೊತೆಗೆ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ನೀರು ನಿಂತಿದ್ದು, ನಿಧಾನಗತಿಯ ಸಂಚಾರವಿದೆ.

ಪ್ರತಿಭಟನೆ ಯಾಕೆ?

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್‌ ಆರೋಪಿಸಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಯನ್ನು ʼಇಂಡಿಯಾʼ ಒಕ್ಕೂ ನಡೆಸುತ್ತಿದೆ.

Must Read