ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಯಿಂದ ಹಲ್ಲೆ ಆರೋಪದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದು, ಬಿಭವ್ ಕುಮಾರ್ ಅರೆಸ್ಟ್ ಬಳಿಕ ಆಪ್ ಕಾರ್ಯಕರ್ತರು ಮತ್ತು ನಾಯಕರಿಂದ ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿದೆ ಎಂದು ಹೇಳಿದ್ದಾರೆ.
ಭಿಭವ್ ಕುಮಾರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರತೀ ತಮ್ಮ ವಿರುದ್ಧ ಏಕಪಕ್ಷೀಯವಾದ ವಿಡಿಯೋ ಹರಿಬಿಟ್ಟ ನಂತರ ನನ್ನ ವಿರುದ್ಧ ಆಪ್ ಮುಖಂಡರು ಮತ್ತು ಕಾರ್ಯಕರ್ತರು ಮುಗಿ ಬೀಳುತ್ತಿದ್ದಾರೆ. ನನ್ನ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜೀವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಸ್ವಾತಿ ಮಲಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಮಗೆ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್‌ಗಳನ್ನೂ ಶೇರ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಸ್ವಾತಿ ಮಲಿವಾಲ್ ಮೇಲೆ ಸಿಎಂ ಕೇಜ್ರಿವಾಲ್ ನಿವಾಸದಲ್ಲೇ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದನು. ಇದಾದ ನಾಲ್ಕು ದಿನಗಳ ಬಳಿಕ ಸ್ವಾತಿ ಪೊಲೀಸರಿಗೆ ದೂರು ನೀಡಿದ್ದರು.
ಸ್ವಾತಿ ತಮ್ಮ ದೂರಿನಲ್ಲಿ ತಾವು ಆ ದಿನ ಅನುಭವಿಸಿದ ನೋವಿನ ಬಗ್ಗೆ ದಾಖಲಿಸಿದ್ದಾರೆ. ಬಿಭವ್ ಕುಮಾರ್ 7-8ರಿಂದ ಎಂಟು ಬಾರಿ ಕಪಾಳಕ್ಕೆ ಬಾರಿಸಿದ್ದಾನೆ. ನಾನು ನೆಲಕ್ಕೆ ಬಿದ್ದಾಗ ನಿರಂತರವಾಗಿ ನನ್ನ ಹೊಟ್ಟೆ, ಎದೆ, ಬೆನ್ನಿಗೆ ಒದ್ದಿದ್ದಾನೆ. ಅಲ್ಲದೇ ನನ್ನನ್ನು ಕಾಲುಗಳನ್ನು ಹಿಡಿದು ನೆಲದಲ್ಲಿ ಎಳೆದಾಡಿದ್ದು, ಬಟ್ಟೆಯನ್ನ ಎಳೆದಾಡಿದ್ದಾನೆ. ನಾನು ಅವತ್ತು ಋತುಮತಿಯಾಗಿದ್ದೆ. ಹೊಟ್ಟೆ ಬಹಳ ನೋಯುತ್ತಿದೆ ದಯವಿಟ್ಟು ಬಿಟ್ಟು ಬಿಡು ಎಂದರೂ ಕೇಳದೇ ನನ್ನ ಹೊಟ್ಟೆ ಕಾಲುಗಳಿಂದ ಒದ್ದಿದ್ದಾನೆ ಎಂದು ಸ್ವಾತಿ ಹೇಳಿದ್ದರು. ಇದಾದ ಬಳಿಕ ಕಳೆದ ವಾರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್‌ನನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.